ಉದಯಕಾಲ ನ್ಯೂಸ್, ಬೆಂಗಳೂರು: ಉದ್ಯಾನ ನಗರಿಯಲ್ಲಿ ದಿನೇ ದಿನೇ ನಕಲಿ ಔಷಧಿಗಳ ಹಾವಳಿ ಹೆಚ್ಚುತ್ತಿದೆ.ಈ ಬಗ್ಗೆ ಭಾರೀ ಸಂಚಲನ ಮೂಡಿಸಿದ್ದ ನಕಲಿ ಔಷಧಿಗಳ ಜಾಲದ ಬಗ್ಗೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ನಗರದ 5 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ಪ್ರಮುಖ ಆರೋಪಿಯ ಬ್ಯಾಂಕ್ ಖಾತೆಯಲ್ಲಿದ್ದ 9 ಲಕ್ಷ ರೂಪಾಯಿ ನಗದು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಕೃತ್ಯಕ್ಕೆ ಬಳಸುತ್ತಿದ್ದ ಹಲವಾರು ಡಿಜಿಟಲ್ ಉಪಕರಣಗಳು ಹಾಗೂ ಅಪರಾಧ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಾರ್ಮ್ಹೌಸ್ನಲ್ಲಿ ಜೀವ ರಕ್ಷಕ ನಕಲಿ ಔಷಧಿಗಳ ತಯಾರಿಕೆ
ಪ್ರಕರಣದ ರೂವಾರಿ ಆರ್. ಪ್ರಶಾಂತ್ ಎಂಬಾತ ಬಿಡದಿ ಸಮೀಪದ ಫಾರ್ಮ್ಹೌಸ್ನಲ್ಲಿ ನಕಲಿ ಔಷಧಿಗಳ ತಯಾರಿಕೆ, ಮರುಪ್ಯಾಕಿಂಗ್ ಮತ್ತು ಲೇಬಲ್ ಬದಲಾವಣೆ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ. ವಿವಿಧ ರಾಜ್ಯಗಳಿಂದ ಕಡಿಮೆ ಬೆಲೆಗೆ ಖರೀದಿಸಿ ತಂದಿದ್ದ ಕಳಪೆ ದರ್ಜೆ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುವ ‘ಜಾವಿಸೆಫ್ಟಾ’ (Zavicefta) ಹಾಗೂ ‘ಎಂಬ್ಲಾವಿಯೋ’ (Emblaveo) ಮುಂತಾದ ಖ್ಯಾತ ಫೈಜರ್ ಪ್ರತಿಜೀವಕಗಳ ಹೆಸರಿನಲ್ಲಿ ಹೊಸ ಸೀಸೆಗಳಲ್ಲಿ ಮರುಪ್ಯಾಕ್ ಮಾಡಲಾಗುತ್ತಿತ್ತು. ಈ ನಕಲಿ ಔಷಧಿಗಳನ್ನು ಮೊದಲು ಡಿಎಂ ಫಾರ್ಮಾಸ್ಯುಟಿಕಲ್ಸ್ ಮೂಲಕ ವಿತರಿಸಿ, ನಂತರ ಕೃಪಾ ಹೆಲ್ತ್ಕೇರ್ ಸಂಸ್ಥೆಗೆ ಪೂರೈಸಲಾಗುತ್ತಿತ್ತು. ಈ ಸಂಸ್ಥೆಯು ಅಸಲಿ ಔಷಧಿಗಳ ಜೊತೆ ನಕಲಿ ಔಷಧಿಗಳನ್ನು ಬೆರೆಸಿ ವಿವಿಧ ಔಷಧೀಯ ಘಟಕಗಳು ಹಾಗೂ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿತ್ತು.
ಆಗಸ್ಟ್ನಲ್ಲಿ ಕೃತ್ಯ ಬಯಲು: ಐಸಿಯು ರೋಗಿಗಳ ಜೀವದೊಂದಿಗೆ ಚೆಲ್ಲಾಟ
ಆಗಸ್ಟ್ 18ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹಾಗೂ ದೊಡ್ಡೇರಿ ಭಾಗದ ಫಾರ್ಮ್ಹೌಸ್ ಮತ್ತು ಅನಧಿಕೃತ ಪ್ಯಾಕಿಂಗ್ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಈ ಅಕ್ರಮ ದಂಧೆ ಬೆಳಕಿಗೆ ಬಂದಿತ್ತು. ತಪಾಸಣೆಯ ವೇಳೆ ಬ್ರ್ಯಾಂಡ್ಗಳ ನಕಲಿ ಲೇಬಲ್ ಹಾಗೂ ಅಂದಾಜು 4.5 ರಿಂದ 5 ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧಗಳು ಪತ್ತೆಯಾಗಿದ್ದವು. ತುರ್ತು ನಿಗಾ ಘಟಕಗಳಲ್ಲಿ (ICU) ಗಂಭೀರ ಕಾಯಿಲೆಗಳಿಗೆ ಬಳಸುವ ಜೀವ ರಕ್ಷಕ ಔಷಧಗಳನ್ನು ಅತ್ಯಂತ ಕಳಪೆ ಮಟ್ಟದಲ್ಲಿ ನಕಲು ಮಾಡಿ, ಶೇ.50ರಷ್ಟು ರಿಯಾಯಿತಿ ದರದಲ್ಲಿ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದ್ದ ಆತಂಕಕಾರಿ ವಿಷಯ ತನಿಖೆಯಿಂದ ತಿಳಿದುಬಂದಿದೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ ಪ್ರತ್ಯೇಕ ತನಿಖೆ ಮುಂದುವರಿಸಿದೆ.
#FakeMedicineRacket #EnforcementDirectorate #BengaluruNews #EDRaids #UdayakalaNews #HealthSafety #CrimeNews

