Saturday, October 31, 2026
Menu

ಫೈವ್ ಸ್ಟಾರ್ ಹೋಟೆಲ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ವಿದ್ಯುತ್‌ ಶಾಕಿಗೆ ಇಬ್ಬರು ವಿದೇಶಿಗರು ಬಲಿ!

ಉದಯಕಾಲ ನ್ಯೂಸ್,ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಐಷರಾಮಿ ಹೋಟೆಲ್ ಒಂದರಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು ವಿದ್ಯುತ್‌ ಪ್ರವಹಿಸಿ (Electrocution) ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೀವ್ರ ಆಘಾತವುಂಟು ಮಾಡಿದೆ. ಹೋಟೆಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ದುರ್ಮರಣಕ್ಕೆ ಕಾರಣವೆಂಬ ಗಂಭೀರ ಆರೋಪ ಕೇಳಿಬಂದಿದ್ದು, ಐಟಿ ಹಬ್‌ನಲ್ಲಿ ಅತಿಥಿಗಳ ಸುರಕ್ಷತೆಗೆ ಇರುವ ಕಳಪೆ ವ್ಯವಸ್ಥೆ ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ಐಷರಾಮಿ ಹೋಟೆಲ್‌ನಲ್ಲಿ ಭದ್ರತಾ ಲೋಪ: ಪ್ರಾಣ ಕಳೆದುಕೊಂಡ ವಿದೇಶಿಗರು

ನಗರದ ಪ್ರತಿಷ್ಠಿತ ‘ಕೊನ್ರಾಡ್ ಹೋಟೆಲ್’ನಲ್ಲಿ (Conrad Hotel) ಈ ಘಟನೆ ನಡೆದಿದೆ. ಹೋಟೆಲ್‌ನ ಮೂರನೇ ಮಹಡಿಯಲ್ಲಿ ನಿರ್ಮಿಸಲಾಗಿರುವ ಸ್ವಿಮ್ಮಿಂಗ್ ಪೂಲ್‌ನಲ್ಲಿ ವಿದೇಶಿ ಪ್ರಜೆಗಳು ವಿಶ್ರಾಂತಿ ಪಡೆಯುತ್ತಿದ್ದರು. ರಾತ್ರಿ 11:30ರ ಸುಮಾರಿಗೆ ಈಜು ಮುಗಿಸಿ ಮೇಲಕ್ಕೆ ಬರುವ ವೇಳೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಸ್ಲೋವೇಕಿಯಾ ಮೂಲದ ಓರಿಯಾಟ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಕ್ಷಣೆಗೆ ತೆರಳಿದವರಿಗೂ ಗಾಯ

ನೀರಿನಲ್ಲಿ ಒದ್ದಾಡುತ್ತಿದ್ದವರನ್ನು ರಕ್ಷಿಸಲು ಮುಂದಾದ ಅಮೆರಿಕ ಮೂಲದ ಮತ್ತೊಬ್ಬ ಹೋಟೆಲ್ ಅತಿಥಿ ಹಾಗೂ ಹೋಟೆಲ್ ಅಟೆಂಡ್‌ಗೂ ವಿದ್ಯುತ್ ತಗುಲಿ ಗಾಯಗಳಾಗಿವೆ. ಕೂಡಲೇ ಅವರನ್ನು ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಘಟನಾ ಸ್ಥಳಕ್ಕೆ ಹಲಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಹೋಟೆಲ್ ಸಿಬ್ಬಂದಿ ಹಾಗೂ ಮ್ಯಾನೇಜ್‌ಮೆಂಟ್‌ನ ಗಂಭೀರ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣವೆಂದು ಮೃತರ ಕುಟುಂಬಸ್ಥರು ಹಾಗೂ ಸಂಬಂಧಪಟ್ಟವರು ಆಕ್ರೋಶ ವ್ಯಕ್ತಪಡಿಸಿದ್ದು, ಹೋಟೆಲ್ ಆಡಳಿತ ಮಂಡಳಿ ವಿರುದ್ಧ ಹಲಸೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

#BengaluruNews #ConradHotel #ElectricShockTragedy #ForeignersKilled #HalasuruPolice #UdayakalaNews #KarnatakaNews #SwimmingPoolAccident

Related Posts

Leave a Reply

Your email address will not be published. Required fields are marked *