Wednesday, October 28, 2026
Menu

ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಆಹ್ವಾನ ಕೊಟ್ಟ ಪ್ರಧಾನಿ ಮೋದಿ

ಉದಯಕಾಲ ನ್ಯೂಸ್, ನವದೆಹಲಿ: ಕಳೆದ ವರ್ಷ ನಡೆದ ‘ಆಪರೇಷನ್‌ ಸಿಂಧೂರ’ ಸೇನಾ ಕಾರ್ಯಾಚರಣೆಯ ಬಳಿಕ ಇದೇ ಮೊದಲ ಬಾರಿಗೆ ಮೋದಿ ಸರ್ಕಾರ ಪಾಕಿಸ್ತಾನಕ್ಕೆ ಮಹತ್ವದ ರಾಜತಾಂತ್ರಿಕ ಆಹ್ವಾನ ನೀಡಿದೆ. ನವದೆಹಲಿಯಲ್ಲಿ ನವೆಂಬರ್‌ 20ರಿಂದ 22ರ ವರೆಗೆ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (SCO) ಪ್ರಥಮ ‘ನಾಗರಿಕತೆಗಳ ಸಂವಾದ ವೇದಿಕೆ’ಗೆ (Civilisational Dialogue Forum) ಪಾಕಿಸ್ತಾನ ಸೇರಿದಂತೆ ಎಲ್ಲಾ 10 ಸದಸ್ಯ ರಾಷ್ಟ್ರಗಳಿಗೆ ಅಧಿಕೃತ ಆಹ್ವಾನ ಕಳುಹಿಸಲಾಗಿದೆ.

ಈ ಸಭೆಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚ್ಚಿ ಅವರಿಗೂ ಭಾರತ ಆಹ್ವಾನ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾವನೆಯ ಮೇರೆಗೆ ದೆಹಲಿಯ ಐತಿಹಾಸಿಕ ಪುರಾತನ ಕೋಟೆಯಲ್ಲಿ ಆಯೋಜಿಸಲಾಗುತ್ತಿರುವ ಈ ಮೂರು ದಿನಗಳ ಸಮ್ಮೇಳನದಲ್ಲಿ, ಸಂಸ್ಕೃತಿ, ಕಲೆ, ಶಿಕ್ಷಣ ಮತ್ತು ಪರಂಪರೆಯ ಮರುಸ್ಥಾಪನೆ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ.

ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಕೈಗೊಂಡ ಕಠಿಣ ‘ಆಪರೇಷನ್ ಸಿಂಧೂರ’ದ ಬಳಿಕ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಮುಂದುವರಿದಿದೆ. ಆದಾಗ್ಯೂ, ಎಸ್‌ಸಿಒ (SCO) ಒಕ್ಕೂಟದ ಬಹುಪಕ್ಷೀಯ ನಿಯಮಾವಳಿಗಳು ಮತ್ತು ಜಾಗತಿಕ ರಾಜತಾಂತ್ರಿಕ ಮೌಲ್ಯಗಳಿಗೆ ಬದ್ಧವಾಗಿ ಭಾರತ ಈ ಆಹ್ವಾನವನ್ನು ಕಡ್ಡಾಯವಾಗಿ ನೀಡಿದೆ. ಭಾರತದ ಈ ನಡೆ ಪ್ರಾದೇಶಿಕ ಸಹಕಾರಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಒಂದು ವೇಳೆ ಪಾಕಿಸ್ತಾನಿ ಸಚಿವರು ಈ ಸಭೆಗೆ ಹಾಜರಾದರೆ, ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನದ ಹಿರಿಯ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಲಿದೆ. ಸದ್ಯ ಪಾಕಿಸ್ತಾನ ಸರ್ಕಾರವು ಈ ಸಭೆಯಲ್ಲಿ ಭಾಗವಹಿಸುವ ಕುರಿತು ಯಾವುದೇ ಅಧಿಕೃತ ಅಂತಿಮ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.
#OperationSindoor #NewDelhi #SCOSummit #IndiaPakistan #ModiGovernment #CurrentAffairs #UdayakalaNews #ForeignPolicy #CivilisationalDialogue

Related Posts

Leave a Reply

Your email address will not be published. Required fields are marked *