Wednesday, October 28, 2026
Menu

ಟೋಲ್ ಪ್ಲಾಜಾ ಸ್ಥಳೀಯ ನಿವಾಸಿಗಳಿಗೆ ವಿಶೇಷ ವಾರ್ಷಿಕ ಪಾಸ್

ಉದಯಕಾಲ ನ್ಯೂಸ್,ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಹಾಗೂ ಟೋಲ್ ಪ್ಲಾಜಾಗಳ ಸಮೀಪ ನಿತ್ಯ ಓಡಾಡುವ ಸ್ಥಳೀಯ ನಿವಾಸಿಗಳಿಗೆ ಕೇಂದ್ರ ಸರ್ಕಾರವು ಮಹತ್ವದ ಸಿಹಿಸುದ್ದಿಯೊಂದನ್ನು ನೀಡಿದೆ. ಟೋಲ್ ಗೇಟ್‌ಗಳ ಸುತ್ತಮುತ್ತ ವಾಸಿಸುವವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಫಾಸ್ಟ್ರ್ಯಾಗ್ (FASTag) ಆಧಾರಿತ ವಿಶೇಷ ವಾರ್ಷಿಕ ರಿಯಾಯಿತಿ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ನವೆಂಬರ್ 1 ರಿಂದ ಈ ಹೊಸ ನಿಯಮಗಳು ದೇಶಾದ್ಯಂತ ಜಾರಿಗೆ ಬರಲಿವೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯೊಳಗೆ ವಾಸಿಸುವ ಮತ್ತು ವಾಣಿಜ್ಯೇತರ (ಪ್ರೈವೇಟ್ ಕಾರು, ಜೀಪ್ ಅಥವಾ ವ್ಯಾನ್ ಮುಂತಾದ) ಖಾಸಗಿ ವಾಹನಗಳನ್ನು ಹೊಂದಿರುವ ಮಾಲೀಕರು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ವಿಶೇಷ ವಾರ್ಷಿಕ ಪಾಸ್‌ನ ದರವು ಆಯಾ ಟೋಲ್ ಪ್ಲಾಜಾದ ಭೌಗೋಳಿಕ ಪ್ರದೇಶವನ್ನು ಅವಲಂಬಿಸಿರಲಿದೆ.

ನಗರ ಅಥವಾ ಪುರಸಭೆ ವ್ಯಾಪ್ತಿಯ ಒಳಗೆ ಬರುವ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ಶುಲ್ಕ 3,000 ರೂ.ಗಳಾಗಿರಲಿದೆ. ಅದೇ ರೀತಿ, ಮುನ್ಸಿಪಲ್ ಅಥವಾ ಸ್ಥಳೀಯ ಪಟ್ಟಣದ ಮಿತಿಯ ಹೊರಗೆ ಇರುವ ಗ್ರಾಮೀಣ ಪ್ರದೇಶದ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಶುಲ್ಕ ಕೇವಲ 1,500 ರೂ.ಗಳಾಗಿ ನಿಗದಿಪಡಿಸಲಾಗಿದೆ. ಈ ಪಾಸ್ ಕೇವಲ ನಿರ್ದಿಷ್ಟ ಮತ್ತು ಆಯ್ದ ಟೋಲ್ ಪ್ಲಾಜಾಗೆ ಮಾತ್ರ ಅನ್ವಯವಾಗಲಿದ್ದು, ಬೇರೆ ಕಡೆಗಳಲ್ಲಿ ಇದನ್ನು ಬಳಸಲು ಬರುವುದಿಲ್ಲ. ಅಲ್ಲದೆ, ಪರ್ಯಾಯ ರಸ್ತೆಗಳು ಅಥವಾ ಸೇವಾ ರಸ್ತೆಗಳು ಲಭ್ಯವಿರುವ ಕಡೆಗಳಲ್ಲಿ ಈ ಪಾಸ್‌ಗಳು ಅನ್ವಯಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ನಿತ್ಯವೂ ಸ್ಥಳೀಯವಾಗಿ ಓಡಾಡುವ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸಲು ಸರ್ಕಾರದ ಈ ಹೆಜ್ಜೆ ಸಹಕಾರಿಯಾಗಲಿದೆ.

#TollPlaza #FASTagPass #NationalHighways #MoRTH #LocalResidentsPass #CentralGovernment #UdayakalaNews #CurrentAffairs #HighwayToll

Related Posts

Leave a Reply

Your email address will not be published. Required fields are marked *