ಉದಯಕಾಲ ನ್ಯೂಸ್, ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿದ ಕಲ್ಟ್ ಕ್ಲಾಸಿಕ್ ‘ಎ’ ಚಿತ್ರಕ್ಕೆ ಬಂಡವಾಳ ಹೂಡಿ ಭರ್ಜರಿ ಯಶಸ್ಸು ಕಂಡಿದ್ದ ಬಿ.ಜಿ. ಮಂಜುನಾಥ್ (ಸಿಲ್ಕ್ ಮಂಜು) (65) ಅವರು ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹಲವು ದಿನಗಳಿಂದ ಕಿಡ್ನಿ ಸಂಬಂಧಿ ಕಾಯಿಲೆ ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವುದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿದೆ.
‘ಎ’ ಸಿನಿಮಾದಿಂದ ಜನಪ್ರಿಯತೆ
ಮೂಲತಃ ರೇಷ್ಮೆ ಉದ್ಯಮಿಯಾಗಿದ್ದ ಮಂಜುನಾಥ್ ಅವರು, ಉಪೇಂದ್ರ ಅವರ ಚೊಚ್ಚಲ ನಿರ್ದೇಶನದ ‘ಎ’ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾದರು. ಈ ಚಿತ್ರ ಭರ್ಜರಿ ಗೆಲುವು ಕಂಡ ಬಳಿಕ ಅವರು ಗಾಂಧಿನಗರದಲ್ಲಿ ‘ಸಿಲ್ಕ್ ಮಂಜು’ ಎಂದೇ ಖ್ಯಾತರಾದರು.‘ಹಗಲು ವೇಷ’, ‘ಪ್ರತ್ಯರ್ಥ’, ‘ಸೂರ್ಯಕಾಂತಿ’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ಸೈಕಿಕ್’, ‘ಟೆರರ್’ ಸೇರಿದಂತೆ ಹಲವು ವಿಭಿನ್ನ ಕಥೆಯುಳ್ಳ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು.
ಆರ್ಥಿಕ ಸಂಕಷ್ಟ ಹಾಗೂ ಸಾಲದ ಸುಳಿ
ಕೊನೆಯದಾಗಿ ನಿರ್ಮಿಸಿದ ‘ಟೆರರ್’ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣದ ಕಾರಣ ದೊಡ್ಡ ನಷ್ಟ ಉಂಟಾಗಿತ್ತು. ಸುಮಾರು 8 ಕೋಟಿ ರೂ. ವೆಚ್ಚದ ಈ ಚಿತ್ರಕ್ಕಾಗಿ ಸಾಲ ಮಾಡಿದ್ದಲ್ಲದೆ, ಸ್ವಂತ ಮನೆಯನ್ನೂ ಅಡವಿಡಲಾಗಿತ್ತು ಎಂದು ಕುಟುಂಬದವರು ನೋವು ತೋಡಿಕೊಂಡಿದ್ದಾರೆ. ಸಿನಿಮಾಗಳ ಸತತ ಸೋಲು ಮತ್ತು ಸಾಲದ ಸುಳಿಯಿಂದಾಗಿ ತೀವ್ರ ಮಾನಸಿಕ ಖಿನ್ನತೆ ಹಾಗೂ ಅನಾರೋಗ್ಯಕ್ಕೀಡಾಗಿದ್ದ ಸಿಲ್ಕ್ ಮಂಜು ಅವರು, ಕೊನೆಯ ಕ್ಷಣಗಳಲ್ಲಿ ಆಸ್ಪತ್ರೆಯ ಬಿಲ್ ಪಾವತಿಸಲೂ ಆಗದಷ್ಟು ದಯನೀಯ ಸ್ಥಿತಿ ಎದುರಿಸಬೇಕಾಯಿತು ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಮೃತರ ಅಂತ್ಯಸಂಸ್ಕಾರವು ಇಂದು ನೆರವೇರಲಿದೆ. ಅವರ ನಿಧನಕ್ಕೆ ಸ್ಯಾಂಡ್‌ವುಡ್‌ನ ಗಣ್ಯರು ಹಾಗೂ ಕಲಾಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
#SilkManju #AMovie #Upendra #SandalwoodNews #UdayakalaNews #ProducerSilkManju #KannadaCinema #BangaloreNews


