ಉದಯಕಾಲ ನ್ಯೂಸ್, ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಅಧೀನದಲ್ಲಿರುವ ವೈಮಾನಿಕ ಅಭಿವೃದ್ಧಿ ಸಂಸ್ಥೆಯ (ADA) ಹಿರಿಯ ವಿಜ್ಞಾನಿಯೊಬ್ಬರು ಕೆಲಸದ ತೀವ್ರ ಒತ್ತಡ ಹಾಗೂ ಮಾನಸಿಕ ಖಿನ್ನತೆಯಿಂದ ನೊಂದ್ಡು ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಸೀಗೆಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಅಕ್ಟೋಬರ್ 21ರ ಸಂಜೆ ಈ ದುರಂತ ಸಂಭವಿಸಿದೆ. ಮೃತರನ್ನು ಎಡಿಎ ಗ್ರೇಡ್ ‘ಎಫ್’ ವಿಭಾಗದ ಹಿರಿಯ ವಿಜ್ಞಾನಿ ಶರದ್ ಕಟಿಯಾರ್ (47) ಎಂದು ಗುರುತಿಸಲಾಗಿದೆ.
ಎಡಿಎ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಶರದ್ ಕಟಿಯಾರ್ ಅವರು, ಅಕ್ಟೋಬರ್ 21ರ ಸಂಜೆ 7:30 ರಿಂದ 8 ಗಂಟೆ ಸುಮಾರಿಗೆ ತಾವು ವಾಸವಿದ್ದ ಅಪಾರ್ಟ್‌ಮೆಂಟ್‌ನ 4ನೇ ಅಂತಸ್ತಿನ ಮೆಟ್ಟಿಲುಗಳಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಕೆಲಸದ ಒತ್ತಡವೇ ಕಾರಣ!
ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ಕಟಿಯಾರ್ ಅವರು ತೀವ್ರ ಕೆಲಸದ ಒತ್ತಡ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಮೃತರ ಕುಟುಂಬಸ್ಥರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ದುರಂತ ಸಂಭವಿಸಿದ ಅಕ್ಟೋಬರ್ 21ರಂದೂ ಸಹ ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ ಖಿನ್ನತೆಗೆ ಔಷಧಗಳನ್ನು ಪಡೆದುಕೊಂಡು ಬಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕುಟುಂಬಸ್ಥರ ದೂರಿನ ಆಧಾರದ ಮೇಲೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (UDR) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೆಲಸದ ಸ್ಥಳದ ಒತ್ತಡದ ಕುರಿತು ಪತ್ನಿ ಹಾಗೂ ಪೋಷಕರಿಂದ ಅಧಿಕೃತ ಹೇಳಿಕೆಗಳನ್ನು ಪಡೆದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
#ADAscientist #BangaloreCrime #WorkplaceStress #DRDO #UdayakalaNews #MentalHealth #KRPuram #BangaloreNews #SuicidePrevention

