Menu

ಜಲವಿದ್ಯುತ್ ಯೋಜನೆಗೆ 32,490 ಮರಗಳಿಗೆ ಕೊಡಲಿ: ಬಿಜೆಪಿ ಸರ್ಕಾರದ ವಿರುದ್ಧ ಸಂಜಯ್ ರಾವತ್ ಆಕ್ರೋಶ!

ಉದಯಕಾಲ ನ್ಯೂಸ್, ಮುಂಬೈ: ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಜಲವಿದ್ಯುತ್ ಯೋಜನೆಯೊಂದರ ಶಂಕುಸ್ಥಾಪನೆಗಾಗಿ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಪರಿಸರ ಸೂಕ್ಷ್ಮ ವಲಯವಾದ ಭೀಮಾಶಂಕರ ವನ್ಯಜೀವಿ ಅಭಯಾರಣ್ಯದ ಬಳಿ 32,000ಕ್ಕೂ ಹೆಚ್ಚು ಮರಗಳನ್ನು ಕಡಿಯುವಂತೆ ಮಹಾರಾಷ್ಟ್ರ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿರುವುದಕ್ಕೆ ಶಿವಸೇನೆ (ಯುಬಿಟಿ) ಹಿರಿಯ ನಾಯಕ ಸಂಜಯ್ ರಾವತ್ ತೀವ್ರ ಹರಿಹಾಯ್ದಿದ್ದಾರೆ. ಗುಜರಾತ್ ಮೂಲದ ಖಾಸಗಿ ಕಂಪನಿಗೆ ಅನುಕೂಲ ಮಾಡಿಕೊಡಲು ಮಹಾರಾಷ್ಟ್ರ ಸರ್ಕಾರವು ಪರಿಸರ ನಾಶಕ್ಕೆ ಮುಂದಾಗಿದೆ ಎಂದು ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ರಾಯಗಢ ಜಿಲ್ಲೆಯಲ್ಲಿ ಕೈಗೊಳ್ಳಲಿರುವ ಬೃಹತ್ 13,505 ಕೋಟಿ ರೂ. ವೆಚ್ಚದ ‘ಸೈಡೋಂಗರ್-I ಕರ್ಜತ್ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ’ಗಾಗಿ ಬರೋಬ್ಬರಿ 233 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. 3,000 ಮೆಗಾವ್ಯಾಟ್ ಸಾಮರ್ಥ್ಯದ ಈ ಯೋಜನೆಗಾಗಿ ಕರ್ಜತ್‌ನಲ್ಲಿರುವ 197 ಹೆಕ್ಟೇರ್ ಮೀಸಲು ಅರಣ್ಯ, 26 ಹೆಕ್ಟೇರ್ ಖಾಸಗಿ ಅರಣ್ಯ ಹಾಗೂ 9 ಹೆಕ್ಟೇರ್ ಸಂರಕ್ಷಿತ ಅರಣ್ಯ ಭೂಮಿಯನ್ನು ತೆರವುಗೊಳಿಸಬೇಕಿದೆ. ಕರ್ಜತ್ ಪೂರ್ವ ವಲಯ ಅರಣ್ಯಾಧಿಕಾರಿ ಸಮೀರ್ ಶಿಂಧೆ ಅವರ ಪತ್ರದ ಪ್ರಕಾರ ಒಟ್ಟು 32,490 ಮರಗಳನ್ನು ಕಡಿಯಲು ಅವಕಾಶ ನೀಡಲಾಗಿದೆ.

ವಿಶ್ವಗುರು ಮೋದಿ ಭೇಟಿ!

ಈ ಯೋಜನೆಯ ಉದ್ಘಾಟನಾ ಸಮಾರಂಭಕ್ಕಾಗಿ 2026ರ ನವೆಂಬರ್ 3ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಸಂಬಂಧಿತ ಮರಗಳನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಸಂಜಯ್ ರಾವತ್ ಆರೋಪಿಸಿ ಎಕ್ಸ್ (X) ಜಾಲತಾಣದಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಈ ಯೋಜನಾ ಸ್ಥಳವು ಪ್ರಸಿದ್ಧ ಭೀಮಾಶಂಕರ ವನ್ಯಜೀವಿ ಅಭಯಾರಣ್ಯದಿಂದ ಕೇವಲ 16 ಕಿ.ಮೀ ಮತ್ತು ಭೀಮಾಶಂಕರ ದೇವಾಲಯದಿಂದ 20 ಕಿ.ಮೀ ದೂರದಲ್ಲಿದೆ. ಇದು ವನ್ಯಜೀವಿಗಳಿಗೆ ಮತ್ತು ಪರಿಸರಕ್ಕೆ ಭಾರೀ ಅಪಾಯ ತಂದೊಡ್ಡಲಿದೆ ಎಂದು ವಿರೋಧ ಪಕ್ಷಗಳು ಹಾಗೂ ಪರಿಸರ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಗುಜರಾತ್ ಕಂಪನಿಗೆ ಮಣೆ – ಸರ್ಕಾರದ ವಿರುದ್ಧ ವಾಗ್ದಾಳಿ

ಗುಜರಾತ್ ಮೂಲದ ‘ಟೊರೆಂಟ್ ಪವರ್’ (Torrent Power) ಸಂಸ್ಥೆಯ ಯೋಜನೆಗೆ ದಾರಿ ಮಾಡಿಕೊಡಲು ಮಹಾಯುತಿ ಸರ್ಕಾರವು ಅರಣ್ಯ ಸಂಪತ್ತನ್ನು ನಾಶ ಮಾಡುತ್ತಿದೆ ಎಂದು ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯನ್ನು ಬೆಂಬಲಿಸುತ್ತಿರುವ ಹಿರಿಯ ವಕೀಲ ಹಾಗೂ ಬಿಜೆಪಿ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯ ಉಜ್ವಲ್ ನಿಕಮ್ ಅವರನ್ನೂ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹಸಿರು ಹೊದಿಕೆಯ ನಾಶಕ್ಕೆ ಕಾರಣವಾಗುವ ಇಂತಹ ವಿನಾಶಕಾರಿ ಯೋಜನೆಯನ್ನು ಬೆಂಬಲಿಸುವ ಬದಲು, ಸಾರ್ವಜನಿಕರ ಹಾಗೂ ಪರಿಸರದ ಪರವಾಗಿ ನಿಲ್ಲಬೇಕು ಎಂದು ರಾವತ್ ಆಗ್ರಹಿಸಿದ್ದಾರೆ.
#SanjayRaut #PMModi #MaharashtraGovt #BhimashankarWildlifeSanctuary #TorrentPower #UdayakalaNews #EnvironmentalConcern #Karjat #ShivSenaUBT #PoliticalNews

Related Posts

Leave a Reply

Your email address will not be published. Required fields are marked *