Menu

ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ಸಾಧ್ಯವಿಲ್ಲ ಎಂದ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿನ ಅರಣ್ಯ ಪ್ರದೇಶವನ್ನು ಯಾವುದೇ ಖಾಸಗಿ ವ್ಯಕ್ತಿಯ ಪರವಾಗಿ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಅರಣ್ಯ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಸಬಾ ಹೋಬಳಿಯ ಮುಮ್ಮಡಿಕಾವಲ್ ಗ್ರಾಮದ ಅರಣ್ಯ ಪ್ರದೇಶದಲ್ಲಿನ ಜಮೀನನ್ನು ಪೋಡಿ ಮತ್ತು ದುರಸ್ತಿ ಮಾಡಲು ನಿರ್ದೇಶಿಸಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಎಚ್.ಶಾಂತಿಭೂಷಣ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ನ್ಯಾಯಪೀಠದ ಪ್ರಮುಖ ಅವಲೋಕನಗಳು

ಅರಣ್ಯ ಭೂಮಿ ವರ್ಗಾವಣೆ ದಾಖಲೆಗಳಿಲ್ಲ: ವಿವಾದಿತ ಜಮೀನು ಸ್ಪಷ್ಟವಾಗಿ ಅರಣ್ಯ ಭೂಮಿಯಾಗಿದ್ದು, ಅದನ್ನು ಅರಣ್ಯೇತರ ಭೂಮಿಯಾಗಿ ಪರಿವರ್ತಿಸಲಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಹೀಗಾಗಿ ಅರಣ್ಯ ಜಮೀನನ್ನು ಯಾವುದೇ ವ್ಯಕ್ತಿಯ ಪರವಾಗಿ ಮಂಜೂರು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಮಹಾರಾಜರ ಕಾಲದ ಅಧಿಸೂಚನೆ: ವಿವಾದಿತ ಜಮೀನನ್ನು ಮೈಸೂರು ಮಹಾರಾಜರು ತಮ್ಮ ಆಡಳಿತಾವಧಿಯ 1941ರ ಮೇ 1ರಂದು, ಮೈಸೂರು ಅರಣ್ಯ ಕಾಯ್ದೆ–1900ರ ಕಲಂ 17ರ ಅನುಸಾರ ಮುಮ್ಮಡಿಕಾವಲ್ ಪ್ರದೇಶವನ್ನು ಅರಣ್ಯ ಭೂಮಿ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ ಎಂದು ಪೀಠ ತಿಳಿಸಿದೆ.
ಸುಪ್ರೀಂ ಕೋರ್ಟ್ ಮೊರೆ ಹೋಗಲು ಸೂಚನೆ: ದೇಶಾದ್ಯಂತ ಅರಣ್ಯ ಭೂಮಿಗೆ ಸಂಬಂಧಿಸಿದ ‘ಟಿ. ಎನ್. ಗೋದಾವರ್ಮನ್ ತಿರುಮುಲ್ಪಾಡ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ’ ಪ್ರಕರಣವು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಹೀಗಾಗಿ ಅರ್ಜಿದಾರರು ಸೂಕ್ತ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬಹುದು ಎಂದು ಪೀಠ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ!
ಪಿರಿಯಾಪಟ್ಟಣ ತಾಲ್ಲೂಕಿನ ಮುಮ್ಮಡಿಕಾವಲ್ ಗ್ರಾಮದ ಹತ್ತು ವಿವಿಧ ಸರ್ವೇ ನಂಬರ್‌ಗಳಲ್ಲಿ ಸಾಗುವಳಿ ಮಾಡುತ್ತಿರುವ ತನ್ನ ಜಮೀನಿನ ಪೋಡಿ ಮತ್ತು ದುರಸ್ತಿಯನ್ನು ನಿಗದಿತ ಅವಧಿಯೊಳಗೆ ಮಾಡಿಕೊಡುವಂತೆ ಮೈಸೂರು ಜಿಲ್ಲಾಡಳಿತಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪಿ.ವೈ.ಮಲ್ಲೇಶ್ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ಏಕಸದಸ್ಯ ಪೀಠ, ಆರು ತಿಂಗಳ ಒಳಗಾಗಿ ಮನವಿ ಪರಿಗಣಿಸುವಂತೆ ತಹಶೀಲ್ದಾರ್ ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಸದ್ಯ ಸರ್ಕಾರದ ಪರವಾಗಿ ತೀರ್ಪು ಬಂದಿದೆ.
#KarnatakaHighCourt #ForestLand #MysuruNews #UdayakalaNews #LegalNews #KarnatakaGovernment #Piriyapatna #SupremeCourt

Related Posts

Leave a Reply

Your email address will not be published. Required fields are marked *