Menu

ನ್ಯಾಯಾಲಯದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿಗೆ 2 ವರ್ಷ ಜೈಲು ಶಿಕ್ಷೆ

ಉದಯಕಾಲ ನ್ಯೂಸ್‌, ಪುತ್ತೂರು (ದಕ್ಷಿಣ ಕನ್ನಡ): ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ವೇಳೆ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೋಷಿ ಸಾಬೀತಾದ ಆರೋಪಿಗೆ ಕೋರ್ಟ್‌ ಎರಡು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ. ಪುತ್ತೂರು ಸಿರಿ ಬಾಗಿಲು ನಿವಾಸಿ ಜಯೇಶ್ ಅಲಿಯಾಸ್ ಜಯೇಶ್ ಕಾಂತ್ ಎಸ್., ಶಾಹಿರ್ ಅಲಿಯಾಸ್ ಶಾಕಿರ್ (41) ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಹಾಗೂ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ (ಅ.ಕ್ರ. 120/2008) ಸಂಬಂಧಿಸಿದಂತೆ, ಭಾರತೀಯ ದಂಡ ಸಂಹಿತೆಯ ಕಲಂ 450, 302 ಹಾಗೂ 201ರ ಅಡಿಯಲ್ಲಿ ಆರೋಪಿ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಿಮಿತ್ತ 2016ರ ಏಪ್ರಿಲ್ 5ರಂದು ಆರೋಪಿಯನ್ನು ಮಂಗಳೂರು ಕಾರಾಗೃಹದಿಂದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕರೆತರಲಾಗಿತ್ತು.

ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿ ಏಕಾಏಕಿ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದನು. ಈ ಘಟನೆ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 224ರ ಅಡಿಯಲ್ಲಿ (ಅ.ಕ್ರ. 91/2016) ಪ್ರತ್ಯೇಕವಾಗಿ ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದ ತನಿಖೆ ಪೂರೈಸಿ ಅಂದಿನ ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಖಾದರ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಪುತ್ತೂರು ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್ ಅವರು, ಅಕ್ಟೋಬರ್ 5, 2026ರಂದು ಆರೋಪಿಗೆ ಎರಡು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಕಾನೂನು ಅಭಿಯೋಜಕರಾದ ಮನೋಜ್ ಕುಮಾರ್ ಸಮರ್ಥವಾಗಿ ವಾದ ಮಂಡಿಸಿದ್ದರು. ಸುಮಾರು ಹತ್ತು ವರ್ಷಗಳ ಹಳೆಯ ಪ್ರಕರಣದಲ್ಲಿ ಇದೀಗ ನ್ಯಾಯಾಲಯದಿಂದ ತೀರ್ಪು ಹೊರಬಂದಿದೆ.
#PutturNews #DakshinaKannada #CourtEscapeCase #UdayakalaNews #PutturCourt #KarnatakaPolice #LegalNews

Related Posts

Leave a Reply

Your email address will not be published. Required fields are marked *