Menu

5 ವಿಧಾನಸಭಾ ಹಾಗೂ 1 ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ: ತಮಿಳುನಾಡಿನಲ್ಲಿ ಟಿವಿಕೆ ಪಕ್ಷಕ್ಕೆ ಅಗ್ನಿಪರೀಕ್ಷೆ!

ನವದೆಹಲಿ: ದೇಶದ 3 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ ಒಟ್ಟು 5 ವಿಧಾನಸಭಾ ಕ್ಷೇತ್ರಗಳು ಮತ್ತು 1 ಲೋಕಸಭಾ ಕ್ಷೇತ್ರಕ್ಕೆ ಇಂದು ಉಪಚುನಾವಣೆಯ ಮತದಾನ ಬಿರುಸಿನಿಂದ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಗೆ ಆರಂಭವಾಗಿರುವ ಮತದಾನವು ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಮತದಾರರ ಅನುಕೂಲಕ್ಕಾಗಿ ಆಯಾ ಜಿಲ್ಲಾಡಳಿತಗಳು ಸ್ಥಳೀಯ ರಜೆ ಘೋಷಿಸಿದ್ದು, ಅಕ್ಟೋಬರ್ 9ರ ಶುಕ್ರವಾರದಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ವಿವಿಧ ರಾಜ್ಯಗಳ ಕಣದ ಚಿತ್ರಣ

ತಮಿಳುನಾಡು: ಮಧುರಾಂತಕಂ ಮತ್ತು ಧರಾಪುರಂ ಕ್ಷೇತ್ರಗಳ ಎಐಎಡಿಎಂಕೆ ಶಾಸಕರು ರಾಜೀನಾಮೆ ನೀಡಿ ನಟ ವಿಜಯ್ ನೇತೃತ್ವದ TVK (ತಮಿಳಗ ವೆಟ್ರಿ ಕಳಗಂ) ಪಕ್ಷ ಸೇರಿದ್ದರು. ಸದ್ಯ ಟಿವಿಕೆ ಪರವಾಗಿ ಅದೇ ಇಬ್ಬರು ನಾಯಕರು ಮತ್ತೆ ಕಣಕ್ಕಿಳಿದಿದ್ದು, ನಾಲ್ಕು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ವಿಜಯ್ ನೇತೃತ್ವದ ಸರ್ಕಾರಕ್ಕೆ ಇದು ಮೊದಲ ಚುನಾವಣಾ ಅಗ್ನಿಪರೀಕ್ಷೆಯಾಗಿದೆ. ಇಲ್ಲಿ TVK, DMK, AIADMK ಹಾಗೂ CPI ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.
ಪಶ್ಚಿಮ ಬಂಗಾಳ: ಹೈ-ಪ್ರೊಫೈಲ್ ಕ್ಷೇತ್ರವಾದ ನಂದಿಗ್ರಾಮ ಹಾಗೂ ರೇಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ರಾಜೀನಾಮೆ ನೀಡಿರುವ ನಂದಿಗ್ರಾಮ ಹಾಗೂ ಹುಮಾಯೂನ್ ಕಬೀರ್ ತೆರವುಗೊಳಿಸಿರುವ ರೇಜಿನಗರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ (TMC) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಅಸ್ಸಾಂ (ನಗಾಂವ್ ಲೋಕಸಭಾ ಕ್ಷೇತ್ರ): ಪ್ರದ್ಯುತ್ ಬೊರ್ಡೊಲೊಯ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ತೆರವಾಗಿದ್ದ ಮುಸ್ಲಿಂ ಬಹುಸಂಖ್ಯಾತ ನಗಾಂವ್ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 19 ಲಕ್ಷ ಮತದಾರರಿದ್ದಾರೆ. ಇಲ್ಲಿ ಆಡಳಿತಾರೂಢ ಬಿಜೆಪಿ (ದೇವಶಿಶ್ ಶರ್ಮಾ), ಕಾಂಗ್ರೆಸ್ (ಸಿಬಾಮೊನಿ ಬೋರಾ) ಮತ್ತು AIUDF (ಬದ್ರುದ್ದೀನ್ ಅಜ್ಮಲ್) ನಡುವೆ ತ್ರಿಕೋನ ಫೈಟ್ ಮುಂದುವರಿದಿದೆ.
ಪುದುಚೇರಿ: ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದು, ತಟ್ಟಂಚಾವಡಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಇಂದು ಇಲ್ಲಿಯೂ ಬಿಗಿ ಭದ್ರತೆಯಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮತದಾರರು ಯಾವುದೇ ಪ್ರಲೋಚನೆಗೆ ಒಳಗಾಗದೆ ತಮ್ಮ ಹಕ್ಕು ಚಲಾಯಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
#ByElection2026 #UdayakalaNews #TamilNaduElection #ThalapathyVijay #TVK #Nandigram #AssamElections #Puducherry #PoliticalNews #IndiaVotes

Related Posts

Leave a Reply

Your email address will not be published. Required fields are marked *