ಬೆಂಗಳೂರು:ನಗರದ ಹೃದಯಭಾಗದಲ್ಲಿರುವ ಅತ್ಯಂತ ಜನನಿಬಿಡ ಹಾಗೂ ಪ್ರಮುಖ ಮಾರ್ಗಗಳಲ್ಲಿ ಒಂದಾದ ರೇಸ್ ಕೋರ್ಸ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ (ಅಕ್ಟೋಬರ್ 5) ಮುಂದಿನ 60 ದಿನಗಳ ಕಾಲ ಈ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಿಸಿದ್ದಾರೆ.
ಶಿವಾನಂದ ಜಂಕ್ಷನ್ ಕಡೆಯಿಂದ ಮೌರ್ಯ ಸರ್ಕಲ್ ಕಡೆಗೆ ಸಾಗುವ ರೇಸ್ ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ವರೆಗಿನ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪ್ರತಿದಿನ ಲಕ್ಷಾಂತರ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ತಡೆಯಲು ಪೊಲೀಸರು ಪ್ರಮುಖ ಪರ್ಯಾಯ ಮಾರ್ಗಗಳನ್ನು ಕಲ್ಪಿಸಿದ್ದಾರೆ.
ವಾಹನ ಸವಾರರಿಗಾಗಿ ಪರ್ಯಾಯ ಮಾರ್ಗಗಳು
1. ಸ್ಯಾಂಕಿ ರಸ್ತೆಯಿಂದ ಕೆ.ಆರ್. ಮಾರುಕಟ್ಟೆ ಕಡೆಗೆ: ಬಿಎಂಟಿಸಿ, ಖಾಸಗಿ ಹಾಗೂ ಭಾರಿ ವಾಹನಗಳು ವಿಂಡ್ಸರ್ ಮ್ಯಾನರ್ ಜಂಕ್ಷನ್ನಿಂದ ನೇರವಾಗಿ ಎಲ್ಆರ್ಡಿಇ (LRDE) ಜಂಕ್ಷನ್ಗೆ ತೆರಳಿ, ಅಲ್ಲಿ ಬಲ ತಿರುವು ಪಡೆದು ಬಸವೇಶ್ವರ ಜಂಕ್ಷನ್ (ಚಾಲುಕ್ಯ ಸರ್ಕಲ್) ಮೂಲಕ ತಮ್ಮ ಗಮ್ಯಸ್ಥಾನ ತಲುಪಬಹುದು.
2. ಸ್ಯಾಂಕಿ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ: ಈ ಮಾರ್ಗದ ವಾಹನಗಳು ಕುಮಾರಕೃಪ ರಸ್ತೆ ಮೂಲಕ ಶಿವಾನಂದ ಸರ್ಕಲ್ ತಲುಪಿ, ಅಲ್ಲಿ ಬಲ ತಿರುವು ಪಡೆದು, ಎಸ್.ಸಿ. ರಸ್ತೆಯಲ್ಲಿ ಎಡತಿರುವು ಪಡೆದು ಮೆಜೆಸ್ಟಿಕ್ ಕಡೆಗೆ ಸಾಗಬೇಕು.
3. ಟ್ರಿಲೈಟ್ ಜಂಕ್ಷನ್ ಕಡೆಗೆ ತೆರಳುವವರಿಗೆ: ಓಲ್ಡ್ ಜೆಡಿಎಸ್ ಜಂಕ್ಷನ್ನಿಂದ ತ್ರಿಲೈಟ್ ಜಂಕ್ಷನ್ ಕಡೆಗೆ ತೆರಳುವವರು ಓಲ್ಡ್ ಜೆಡಿಎಸ್ನಲ್ಲಿ ಎಡಭಾಗದ ರಸ್ತೆಯ ಮೂಲಕ ಟ್ರಿಲೈಟ್ ಕಡೆಗೆ ತೆರಳಿ, ರೇಸ್ವ್ಯೂ ಜಂಕ್ಷನ್ನಲ್ಲಿ ಎಡತಿರುವು ಪಡೆದು ಕುಮಾರಕೃಪ ರಸ್ತೆ ಮೂಲಕ ಶಿವಾನಂದ ಜಂಕ್ಷನ್ ತಲುಪಬಹುದು.
4. ಮೌರ್ಯ ಜಂಕ್ಷನ್ ಕಡೆಗೆ ತೆರಳುವವರಿಗೆ: ಟ್ರಿಲೈಟ್ ಜಂಕ್ಷನ್ನಿಂದ ಶಿವಾನಂದ ಫ್ಲೈಓವರ್ ಮೇಲೆ ನೇರವಾಗಿ ಚಲಿಸಿ, ನೆಹರು ಸರ್ಕಲ್ ತಲುಪಿ, ಅಲ್ಲಿಂದ ಎಸ್.ಸಿ. ರಸ್ತೆಯ ಮೂಲಕ ಮೆಜೆಸ್ಟಿಕ್ ಅಥವಾ ಇತರೆ ಮಾರ್ಗಗಳಿಗೆ ತೆರಳಬಹುದು.ಸವಾರರು ಸಂಚಾರ ದಟ್ಟಣೆಯನ್ನು ತಪ್ಪಿಸಲು ಈ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
#BengaluruTraffic #RaceCourseRoad #WhiteTopping #BangaloreTrafficPolice #BMRCL #TrafficAlert #UdayakalaNews #BengaluruNews2026 #KRSJunction


