Thursday, November 19, 2026
Menu

‘ಬಸವಮಂಟಪ’ ಕೃತಿ ಮುಟ್ಟುಗೋಲಿಗೆ ಖಂಡ್ರೆ ಒತ್ತಾಯ!

ಉದಯಕಾಲ ನ್ಯೂಸ್,ಬೆಂಗಳೂರು: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರನ್ನು ಹಾಗೂ ಲಿಂಗಾಯತ ಸಮುದಾಯವನ್ನು ಅವಹೇಳನ ಮಾಡಿರುವ ಆರೋಪದ ಮೇಲೆ ಲೇಖಕ ರವಿ ಹಂಜ್ ಅವರ ‘ಬಸವಮಂಟಪ’ ಕೃತಿಯನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಚಿವ ಈಶ್ವರ ಬಿ. ಖಂಡ್ರೆ ಒತ್ತಾಯಿಸಿದ್ದಾರೆ. ಜತೆಗೆ, ಈ ಕೃತಿ ಹಾಗೂ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಈಶ್ವರ ಖಂಡ್ರೆ, ಸಚಿವನಾಗಿ ನಾನು ಒಂದು ಕೃತಿಯನ್ನು ಮುಟ್ಟುಗೋಲು ಹಾಕುವಂತೆ ಬಹಿರಂಗವಾಗಿ ಒತ್ತಾಯಿಸಬಾರದು ಎಂಬ ಅರಿವು ನನಗಿದೆ. ಆದರೆ, ಇಡೀ ಲಿಂಗಾಯತ ಸಮುದಾಯಕ್ಕೆ ಮತ್ತು ವಿಶ್ವಗುರು ಬಸವಣ್ಣನವರ ಅನುಯಾಯಿಗಳಿಗೆ ತೀವ್ರ ಘಾಸಿ ಉಂಟುಮಾಡುವಂತೆ ಆಧಾರರಹಿತ ಆರೋಪ ಮಾಡಿರುವ ರವಿ ಹಂಜ್ ಅವರ ಕೃತಿಯು ಸಮಾಜದ ಸ್ವಾಸ್ಥ್ಯ ಕದಡುವಂತಿದೆ. ಹೀಗಾಗಿ ಕೃತಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳುವಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ತಾವು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.

ಅವಹೇಳನಕಾರಿ ಬರಹ, ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಆಗ್ರಹ

ಮಾಧ್ಯಮ ಹೇಳಿಕೆಯಲ್ಲಿ ವಾಗ್ದಾಳಿ ನಡೆಸಿರುವ ಈಶ್ವರ ಖಂಡ್ರೆ, ಸಂವಿಧಾನದತ್ತವಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಾನು ಸಂಪೂರ್ಣ ಗೌರವ ನೀಡುತ್ತೇನೆ. ಆದರೆ, ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ, ಬಿಜ್ಜಳನ ಖಜಾನೆ ದುರುಪಯೋಗಪಡಿಸಿಕೊಂಡು ಶರಣ ದಾಸೋಹ ಮಾಡಿದ್ದಾನೆ ಎಂದೆಲ್ಲಾ ಅವಹೇಳನಕಾರಿಯಾಗಿ ಮಾತನಾಡುವವರನ್ನು ಮತ್ತು ಅಂತಹ ಬರಹವನ್ನು ಒಪ್ಪಲು ಸಾಧ್ಯವೇ ಇಲ್ಲ. ಇಂತಹ ಆಧಾರರಹಿತ ಹೇಳಿಕೆಗಳು ಐತಿಹಾಸಿಕ ಸತ್ಯಗಳಿಗೆ ವಿರುದ್ಧವಾಗಿದ್ದು, ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ಕಿಡಿಕಾರಿದ್ದಾರೆ.

ಹೀಗಾಗಿ ಈ ಕೃತಿಯನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಕೂಡಲೇ ಈ ಸಂಬಂಧ ರವಿ ಹಂಜ್ ಅವರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಮಾಹಿತಿ ಹಾಗೂ ಅವಹೇಳನಕಾರಿ ವಿಷಯಗಳು ವ್ಯಾಪಕವಾಗಿ ಹರಡುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸೂಕ್ಷ್ಮವಾಗಿಸಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಲಿಂಗಾಯತರನ್ನು ಲಿಂಗಾಹತರು ಎಂದಿರುವುದು ಪ್ರಚೋದನಕಾರಿ

ವಿರೋಧ ವ್ಯಕ್ತಪಡಿಸಿರುವ ಅವರು, ಲೇಖಕರು ಲಿಂಗಾಯತರನ್ನು ‘ಲಿಂಗಾಹತರು’ ಎಂದು ಉಲ್ಲೇಖಿಸಿದ್ದಾರೆ. ಇದು ಅತ್ಯಂತ ಪ್ರಚೋದನಕಾರಿ ಹೇಳಿಕೆಯಾಗಿದೆ. ಇದು ವಿಶ್ವಾದ್ಯಂತ ಇರುವ ಬಸವಭಕ್ತರ ಮನಸ್ಸಿಗೆ ತೀವ್ರ ನೋವುಂಟು ಮಾಡಿದ್ದು, ಲಿಂಗಾಯತ ಸಮುದಾಯಕ್ಕೂ ಅಪಾರ ವೇದನೆ ತಂದಿದೆ ಎಂದು ಹೇಳಿದ್ದಾರೆ.

ಭಾವನಾತ್ಮಕ ಹಾಗೂ ಐತಿಹಾಸಿಕ ವಿಚಾರಗಳ ಬಗ್ಗೆ ಯಾವುದೇ ಸಮರ್ಪಕ ಸಂಶೋಧನೆ ಇಲ್ಲದೆ, ಸ್ವಯಂಘೋಷಿತ ಸಂಶೋಧಕರೆಂದು ಹೇಳಿಕೊಂಡು ಮಾತನಾಡುವ ಈ ವ್ಯಕ್ತಿಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಪೊಲೀಸರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ. ಅಲ್ಲದೆ, ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಕಾನೂನು ರೀತ್ಯ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳನ್ನು ಒತ್ತಾಯಿಸಿದ್ದಾರೆ.

#EshwarKhandre #BasavaMantapa #RaviHanj #Basavanna #LingayatCommunity #BookBan #SocialMedia #KarnatakaNews #Udayakala #BengaluruNews

Related Posts

Leave a Reply

Your email address will not be published. Required fields are marked *