ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆದಾರರಿಗೆ ದೊಡ್ಡ ಮಟ್ಟದ ನಿರಾಳ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರದ ‘ಮುಂದಿನ ಪೀಳಿಗೆಯ ಜಿಎಸ್ಟಿ’ (Next-Generation GST) ಸುಧಾರಣೆಗಳ ಭಾಗವಾಗಿ, ಜಿಎಸ್ಟಿ ಪ್ರಕರಣಗಳಲ್ಲಿ ತೆರಿಗೆ ಅಧಿಕಾರಿಗಳಿದ್ದ ಬಂಧಿಸುವ ಅಧಿಕಾರವನ್ನು ಸಂಪೂರ್ಣವಾಗಿ ರದ್ದುಪಡಿಸುವುದು ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲು ಇರುವ ಆರ್ಥಿಕ ಮಿತಿಯನ್ನು ರೂ.1 ಕೋಟಿಯಿಂದ ರೂ.5 ಕೋಟಿಗೆ ಏರಿಕೆ ಮಾಡುವ ಪ್ರಮುಖ ಪ್ರಸ್ತಾವನೆಗೆ ಜಿಎಸ್ಟಿ ಮಂಡಳಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಕ್ಟೋಬರ್ 7 ರಂದು ನಡೆಯಲಿರುವ ಮಹತ್ವದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ಕುರಿತು ಅಂತಿಮ ಪರಿಶೀಲನೆ ನಡೆಸಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಪ್ರಸ್ತಾವಿತ ಪ್ರಮುಖ ಸುಧಾರಣೆಗಳು ಹಾಗೂ ಬದಲಾವಣೆಗಳು
ಬಂಧನಾಧಿಕಾರಕ್ಕೆ ನ್ಯಾಯಾಲಯದ ಅನುಮೋದನೆ ಕಡ್ಡಾಯ: ಪ್ರಸ್ತುತ ಜಿಎಸ್ಟಿ ಅಧಿಕಾರಿಗಳ ಬಳಿ ಇರುವ ನೇರ ಬಂಧನ ಅಧಿಕಾರವನ್ನು ಹಿಂಪಡೆಯಲು ಚಿಂತನೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ವ್ಯಕ್ತಿಯ ಬಂಧನಕ್ಕೂ ನ್ಯಾಯಾಂಗದ (Court) ಅಧಿಕೃತ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆಯಿದೆ.
*ಕ್ರಿಮಿನಲ್ ಮೊಕದ್ದಮೆ ಮಿತಿ ಏರಿಕೆ: ತೆರಿಗೆ ವಂಚನೆ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಮತ್ತು ಕಾನೂನು ಕ್ರಮ ಜರುಗಿಸಲು ಇರುವ ಕನಿಷ್ಠ ಆರ್ಥಿಕ ಮಿತಿಯನ್ನುಹಾಲಿ ಇರುವ1 ಕೋಟಿ ರೂ.ಗಳಿಂದ 5 ಕೋಟಿ ರೂ.ಗ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಸಾಮಾನ್ಯ ತೆರಿಗೆ ವಿವಾದಗಳಿಗೆ ಜೈಲು ಶಿಕ್ಷೆ ಬದಲಾಗಿ ತೆರಿಗೆ, ಬಡ್ಡಿ ಹಾಗೂ ದಂಡ ವಸೂಲಿಗೆ ಹೆಚ್ಚಿನ ಒತ್ತು ನೀಡಲಾಗುವುದು.
ಸಾಮಾನ್ಯ ವಿವಾದಗಳಿಗೆ ವಿನಾಯಿತಿ: ಸರಕುಗಳ ವರ್ಗೀಕರಣ (Classification), ಮೌಲ್ಯಮಾಪನ (Valuation) ಮತ್ತು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಗೆ ಸಂಬಂಧಿಸಿದ ಸಾಮಾನ್ಯ ವ್ಯಾಪಾರೀ ವಿವಾದಗಳನ್ನು ಕ್ರಿಮಿನಲ್ ಅಪರಾಧಗಳ ವ್ಯಾಪ್ತಿಯಿಂದ ಹೊರಗಿಡಲು ಕಾನೂನು ನಿಯಮಗಳನ್ನು ಸಡಿಲಿಸಲಾಗುತ್ತಿದೆ.
ಅಪರಾಧ ನಿಯಮಗಳ ಕಡಿತ:ಜಿಎಸ್ಟಿ ಕಾನೂನಿನಲ್ಲಿರುವ ಒಟ್ಟು 24 ಅಪರಾಧಗಳ ಪೈಕಿ 9 ಅಪರಾಧಗಳನ್ನು ಕೈಬಿಡುವ ಹಾಗೂ ಇತರೆ ನಿಯಮಗಳನ್ನು ಸರಳಗೊಳಿಸುವ ಚಿಂತನೆಯಿದೆ. ಅಲ್ಲದೆ, ಕನಿಷ್ಠ ಕಡ್ಡಾಯ ಜೈಲು ಶಿಕ್ಷೆಯ ನಿಯಮವನ್ನು ತೆಗೆದುಹಾಕುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ.
ವ್ಯಾಪಾರೋದ್ಯಮ ಹಾಗೂ ತೆರಿಗೆದಾರರಿಗೆ ಎದುರಾಗುತ್ತಿದ್ದ ಕಾನೂನು ತೊಡಕುಗಳನ್ನು ನಿವಾರಿಸುವ ಮತ್ತು ಕೇವಲ ದಂಡದ ಮೂಲಕ ಸುಲಭವಾಗಿ ತೆರಿಗೆ ಪಾವತಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಎಸ್ಟಿ ಮಂಡಳಿಯ ಈ ಹೆಜ್ಜೆ ಅತ್ಯಂತ ಪರಿಣಾಮಕಾರಿಯಾಗಲಿದೆ.
#GST2 #GSTCouncil #TaxReforms #NewDelhi #BusinessNews #UdayakalaNews #GSTArrestPower #FinanceNews2026 #TaxEvasionLimit


