ಮಂಡ್ಯ: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಮನ್‌ಮುಲ್) ನಂದಿನಿ ಹಾಲಿನ ಪುಡಿ ಕಲಬೆರಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಒಕ್ಕೂಟದ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ ಅವರನ್ನು ಮದ್ದೂರು ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ.
ಪ್ರಕರಣದಲ್ಲಿ ಶಿವಪ್ಪ ಅವರ ನೇರ ಪಾತ್ರವಿರುವುದು ಮೇಲ್ನೋಟಕ್ಕೆ ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಈ ಕಠಿಣ ಕ್ರಮ ಕೈಗೊಂಡಿದ್ದು, ಆರೋಪಿಯನ್ನು ಮದ್ದೂರು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ.
ಮುಖಾಮುಖಿ ವಿಚಾರಣೆ ವೇಳೆ ಬಯಲಾಯ್ತು ಸತ್ಯ
ಈ ಅಕ್ರಮ ಪ್ರಕರಣದ ಪ್ರಮುಖ ಆರೋಪಿ (A1) ಪ್ರದೀಪ್ ಕುಮಾರ್ ಜಾದವ್ ಹಾಗೂ ಒಕ್ಕೂಟದ ಪ್ರಮುಖರ ನಡುವಿನ ಆಡಿಯೋ ಸಂಭಾಷಣೆಯಲ್ಲಿ ಈ ದಂಧೆಯಲ್ಲಿ ಉಮ್ಮಡಹಳ್ಳಿ ಶಿವಪ್ಪ ಶಾಮೀಲಾಗಿರುವ ಬಗ್ಗೆ ಪ್ರಸ್ತಾಪವಾಗಿತ್ತು. ಈ ಪ್ರಮುಖ ಸಾಕ್ಷ್ಯದ ಆಧಾರದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದ ಜಾದವ್‌ನನ್ನು ಪೊಲೀಸರು ಮತ್ತೆ ತಮ್ಮ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು.
ಬಳಿಕ ಪ್ರಮುಖ ಆರೋಪಿ ಪ್ರದೀಪ್ ಕುಮಾರ್ ಜಾದವ್ ಮತ್ತು ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ ಇಬ್ಬರನ್ನೂ ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲಾಯಿತು. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಜಾದವ್ ಅವರು ಶಿವಪ್ಪ ಅವರ ವಿರುದ್ಧ ಅಕ್ರಮದ ಕುರಿತು ಸ್ಪಷ್ಟ ಆರೋಪಗಳನ್ನು ಹೊರಿಸಿದ್ದಾರೆ. ವಿಚಾರಣೆಯಲ್ಲಿ ಅಕ್ರಮದಲ್ಲಿ ಶಿವಪ್ಪ ಅವರ ಕೈವಾಡವಿರುವ ಬಗ್ಗೆ ಬಲವಾದ ಸುಳಿವು ದೊರೆತ ತಕ್ಷಣವೇ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಬಂಧಿತರ ಸಂಖ್ಯೆ 6ಕ್ಕೆ ಏರಿಕೆ
ಈ ಕುಖ್ಯಾತ ಕಲಬೆರಕೆ ಪ್ರಕರಣದಲ್ಲಿ ಈಗಾಗಲೇ ಪ್ರಮುಖ ಆರೋಪಿ ಪ್ರದೀಪ್ ಕುಮಾರ್ ಜಾದವ್ ಸೇರಿದಂತೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ ಅವರ ಬಂಧನದೊಂದಿಗೆ ಈ ಹಗರಣದಲ್ಲಿ ಸೆರೆಯಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಭಾವಿಗಳು ಬಲೆಗೆ ಬೀಳುವ ಸಾಧ್ಯತೆಯಿದೆ.
#Manmul #NandiniMilkPowder #UmmadahalliShivappa #MandyaNews #AddictionCase #MadhurPolice #KarnatakaNews #UdayakalaNews #CooperativeScam2026


