Menu

4.50 ಕೋಟಿ ಗಳಿಸಿ ಮುನ್ನುಗ್ಗುತ್ತಿರುವ ‘ಪ್ರೇಮದ ಊರಲಿ’ ; ಒಳ್ಳೆಯ ಸಿನಿಮಾಗೆ ಗೆಲುವು ನಿಶ್ಚಿತ ಎಂದ ರಿಷಬ್ ಶೆಟ್ಟಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಸಂಖ್ಯೆ ಕುಸಿದಿದೆ ಎಂಬ ಬೇಸರದ ನಡುವೆ, ಕೌಟುಂಬಿಕ ಕಥಾಹಂದರ ಹೊಂದಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದರ ಮೂಲಕ ಹೊಸ ಇತಿಹಾಸ ಬರೆಯುತ್ತಿದೆ. ಅಬ್ಬರವಿಲ್ಲದೆ ತೆರೆಕಂಡರೂ, ಪ್ರೇಕ್ಷಕರ ಬಾಯಿ ಮಾತಿನ ಪ್ರಚಾರದಿಂದ ದಿನದಿಂದ ದಿನಕ್ಕೆ ಶೋಗಳ ಹಾಗೂ ಕಲೆಕ್ಷನ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾ ಸ್ಯಾಂಡಲ್‌ವುಡ್‌ನಲ್ಲಿ ಅಚ್ಚರಿಯ ಯಶಸ್ಸು ದಾಖಲಿಸಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಕನ್ನಡಿಗರಿಂದ ಭರ್ಜರಿ ಬೆಂಬಲ ವ್ಯಕ್ತವಾಗಿದೆ.

ಬಾಕ್ಸಾಫೀಸ್‌ನಲ್ಲಿ ಅಚ್ಚರಿಯ ಏರಿಕೆ

ಸೆಪ್ಟೆಂಬರ್ 25ರಂದು ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ರಂಗಾಯಣ ರಘು, ಶ್ರೀರಾಮ್ ಹಾಗೂ ತಪಸ್ವಿನಿ ಪೂಣಚ್ಚ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಮೊದಲ ದಿನ ಕೇವಲ 10 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಆದರೆ ವಾರದ ದಿನಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆದ ಸಿನಿಮಾ, ತನ್ನ ಐದನೇ ದಿನವೇ ಕೋಟಿ ಕ್ಲಬ್ ಸೇರಿತು. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ತನ್ನ 2ನೇ ಭಾನುವಾರದಂದು (10ನೇ ದಿನ) ಬರೋಬ್ಬರಿ 4.50 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಅತಿ ದೊಡ್ಡ ಮೈಲಿಗಲ್ಲು ತಲುಪಿದೆ. ಒಟ್ಟಾರೆಯಾಗಿ 10 ದಿನಗಳಲ್ಲಿ ಸಿನಿಮಾ ಸುಮಾರು 16.96 ಕೋಟಿ ರೂ. ಗ್ರಾಸ್ ಕಲೆಕ್ಷನ್ ಹಾಗೂ 14.57 ಕೋಟಿ ರೂ. ನೆಟ್ ಕಲೆಕ್ಷನ್ ಗಳಿಸಿದೆ.

ಶೋಗಳ ಸಂಖ್ಯೆ ಹೆಚ್ಚಳ
ಸಿನಿಮಾಗೆ ಸಿಕ್ಕಿದ ಸಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಚಿತ್ರಮಂದಿರಗಳಲ್ಲಿ ಶೋಗಳ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಮೊದಲ ದಿನ ಕೇವಲ 60 ಶೋಗಳಷ್ಟೇ ಇದ್ದು, ಶೇ. 28ರಷ್ಟಿದ್ದ ಆಕ್ಯುಪೆನ್ಸಿ ರೇಟ್, 10ನೇ ದಿನಕ್ಕೆ ಬರೋಬ್ಬರಿ 663 ಶೋಗಳಿಗೆ ಏರಿಕೆಯಾಗಿದೆ. ಹಲವೆಡೆ ಚಿತ್ರಪ್ರದರ್ಶನಗಳು ಹೌಸ್‌ಫುಲ್ ಆಗುತ್ತಿರುವುದು ವಿಶೇಷ.

ರಿಷಬ್ ಶೆಟ್ಟಿ ಗುಣಗಾನ

ಸಿನಿಮಾದ ಈ ಅದ್ಭುತ ಯಶಸ್ಸಿನ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ-ನಿರ್ದೇಶಕ ರಿಷಬ್ ಶೆಟ್ಟಿ, ‘ಒಂದು ಒಳ್ಳೆಯ ಸಿನಿಮಾ ಬಂದಾಗ ಅದನ್ನು ಗೆಲ್ಲಿಸುತ್ತಾರೆ ಅನ್ನೋದನ್ನು ನಮ್ಮ ಜನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ‘ಪ್ರೇಮದ ಊರಲಿ’ ಅದಕ್ಕೆ ಒಂದು ಒಳ್ಳೆಯ ಉದಾಹರಣೆ. ಹಲವು ದಿನಗಳ ನಂತರ ಒಂದು ಕನ್ನಡ ಸಿನಿಮಾಗೆ ಜನರಿಂದ ಇಷ್ಟು ಪ್ರೀತಿ ಮತ್ತು ಬೆಂಬಲ ಸಿಗುತ್ತಿರುವುದನ್ನು ನೋಡೋಕೆ ತುಂಬಾ ಖುಷಿಯಾಗುತ್ತಿದೆ” ಎಂದು ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸುನಾದ್ ಗೌತಮ್ ಸಂಗೀತ ನಿರ್ದೇಶನ ಹಾಗೂ ರಾಜ್‌ಕಾಂತ್ ಕ್ಯಾಮೆರಾ ಕೈಚಳಕವಿರುವ ಈ ಚಿತ್ರವನ್ನು ‘ವೆನಿಲ್ಲಾ ಎಂಟರ್ಟೈನ್ಮೆಂಟ್ಸ್’ ಮತ್ತು ‘ಜಾನಕಮ್ಮ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

#PremadaUrali #RishabShetty #RangayanaRaghu #KannadaCinema #BoxOfficeCollection #Sandalwood #UdayakalaNews #FamilyEntertainer #KarnatakaMovies2026

Related Posts

Leave a Reply

Your email address will not be published. Required fields are marked *