ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಕ್ರಿಕೆಟ್ ವೃತ್ತಿಜೀವನದಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಕೇವಲ 18 ವರ್ಷ ವಯಸ್ಸಿನ ಆರ್ಯವೀರ್ ಅವರನ್ನು 19 ವರ್ಷದೊಳಗಿನವರ (U-19) “ವಿನೂ ಮಂಕಡ್ ಟ್ರೋಫಿ”ಗಾಗಿ ದೆಹಲಿ ತಂಡದ ನಾಯಕನಾಗಿ ನೇಮಕ ಮಾಡಲಾಗಿದೆ.
ಅಕ್ಟೋಬರ್ 8 ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಈ ಪ್ರತಿಷ್ಠಿತ ಟೂರ್ನಾಮೆಂಟ್ಗಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘವು (DDCA) 16 ಸದಸ್ಯರ ಬಲದ ತಂಡವನ್ನು ಪ್ರಕಟಿಸಿದೆ. ತಂಡದ ನಾಯಕತ್ವದ ಜವಾಬ್ದಾರಿಯನ್ನು ಆರ್ಯವೀರ್ಗೆ ವಹಿಸಲಾಗಿದ್ದು, ಅರ್ನಬ್ ಬುಗ್ಗಾ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ.
ಉತ್ತಮ ಪ್ರದರ್ಶನದ ಮುಖೇನ ಗಮನ ಸೆಳೆದಿದ್ದ ಆರ್ಯವೀರ್
ಆರ್ಯವೀರ್ ಇತ್ತೀಚೆಗೆ ಭಾರತದ 19 ವರ್ಷದೊಳಗಿನವರ ತಂಡದ ಪರವಾಗಿ ಆಡುವ ಮೂಲಕ ಗಮನ ಸೆಳೆದಿದ್ದರು. ಸೆಪ್ಟೆಂಬರ್ನಲ್ಲಿ ರಾಜ್ಕೋಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದ್ದ ಅವರು, ಮೊದಲ ಪಂದ್ಯದಲ್ಲಿ 26 ಎಸೆತಗಳಲ್ಲಿ 28 ರನ್ ಗಳಿಸಿದ್ದರು (ಮಳೆ ಪೀಡಿತ ಈ ಪಂದ್ಯದಲ್ಲಿ ಭಾರತ 7 ರನ್ಗಳಿಂದ ಗೆದ್ದಿತ್ತು).
ಎರಡನೇ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಅವರು 47 ರನ್ ಗಳಿಸಿದರು, ಆದರೆ ದುರದೃಷ್ಟವಶಾತ್ ರನೌಟ್ ಆಗುವ ಮೂಲಕ ಕೇವಲ ಮೂರು ರನ್ಗಳಿಂದ ಅರ್ಧಶತಕ ವಂಚಿತರಾದರು. ಮೂರನೇ ಪಂದ್ಯದಲ್ಲೂ 34 ರನ್ ಗಳಿಸುವ ಮೂಲಕ ಒಟ್ಟು ಮೂರು ಪಂದ್ಯಗಳ ಸರಣಿಯಲ್ಲಿ 109 ರನ್ ಕಲೆಹಾಕಿದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂಲಕ ದೊಡ್ಡ ಇನ್ನಿಂಗ್ಸ್ಗಳನ್ನು ಕಟ್ಟುವುದು ಮತ್ತು ಕ್ರೀಸ್ನಲ್ಲಿ ದೀರ್ಘಕಾಲ ನಿಲ್ಲುವ ತಂತ್ರಗಾರಿಕೆಯನ್ನು ಕಲಿತುಕೊಂಡಿರುವುದಾಗಿ ಅವರು ತಿಳಿಸಿದ್ದರು.
ಜೂನಿಯರ್ ಮಟ್ಟದಲ್ಲಿ ಮಿಂಚಿದ್ದ ಯುವ ಆಟಗಾರ
ಇದಕ್ಕೂ ಮುಂಚೆ 2024ರಲ್ಲಿ ಜೂನಿಯರ್ ಮಟ್ಟದಲ್ಲಿ ಮೇಘಾಲಯ ವಿರುದ್ಧ ದೆಹಲಿ ಪರ ಭರ್ಜರಿ 297 ರನ್ಗಳ ದೈತ್ಯ ಇನ್ನಿಂಗ್ಸ್ ಆಡಿ ಆರ್ಯವೀರ್ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಸೀನಿಯರ್ ಮಟ್ಟದಲ್ಲಿ ಹೆಚ್ಚು ಅನುಭವವಿಲ್ಲದಿದ್ದರೂ (2026ರ ದೆಹಲಿ ಪ್ರೀಮಿಯರ್ ಲೀಗ್ನಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ಪರ 2 ಪಂದ್ಯಗಳಲ್ಲಿ 24 ರನ್), ತಮ್ಮ ಪ್ರತಿಭೆಯ ಬಲದಿಂದ ಈಗ ದೆಹಲಿ ಅಂಡರ್-19 ತಂಡದ ನಾಯಕನ ಪಟ್ಟಕ್ಕೇರಿದ್ದಾರೆ. ನಾಯಕನಾಗಿ ಅವರು ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿದ್ದಾರೆ.
ವಿನೂ ಮಂಕಡ್ ಟ್ರೋಫಿಗೆ ದೆಹಲಿ ತಂಡ
ಆರ್ಯವೀರ್ ಸೆಹ್ವಾಗ್ (ನಾಯಕ), ತನ್ಮಯ್ ಚೌಧರಿ, ಅರ್ನಾಬ್ ಬುಗ್ಗಾ (ಉಪನಾಯಕ), ಧನ್ಯಾ ನಕ್ರಾ, ಉದಯ್ ಚಾವ್ಲಾ, ಗರ್ವ್ ಕುಮಾರ್, ಅಭಿರಾಜ್ ಗಗನ್ ಸಿಂಗ್ (ವಿಕೆಟ್-ಕೀಪರ್), ತರುಣ್ ಸಿಂಗ್ (ವಿಕೆಟ್-ಕೀಪರ್), ಆರ್ಯನ್ ಶರ್ಮಾ, ಓಜಸ್ದೀಪ್ ಸಿಂಗ್, ಕಿರಿತ್ ಕೌಶಿಕ್, ವರುಣ್ ಬಂಜಾನಿ, ರುದ್ರ ದೇವ್ ಯಾದವ್, ಪ್ರದ್ಯುಮ್ನ ಸನನ್, ಪಾರ್ಥ್ ರಾಜ್ ಮತ್ತು ಶಾಂತನು ಯಾದವ್
#AryavirSehwag #VirenderSehwag #VinooMankadTrophy #DelhiCricket #U19Cricket #CricketNews #UdayakalaNews #TeamIndia #SportsNews2026


