Saturday, September 26, 2026
Menu

ಸಂಚಿಗೆ ಚುನಾವಣಾ ಆಯೋಗ ಬಲಿಯಾಯಿತೇ

ಬೆಕ್ಕು ಕಣ್ ಮುಚ್ಚಿ ಹಾಲು ಕುಡಿದರೂ, ಮುಂದೊಂದು ದಿನ ಇದೇ ಬೆಕ್ಕಿನ ನಿಜವಾದ ಬಣ್ಣವಂತೂ ಬಯಲಾಗುವುದು ಖಂಡಿತ. ಇದಕ್ಕೆ ಈ ದೇಶದ ಇತಿಹಾಸವೇ ಸಾಕ್ಷಿ. ಸ್ವಾರ್ಥ ರಾಜಕೀಯ ಮತ್ತು ಸರ್ವಾಧಿಕಾರಿ ಧೋರಣೆಯ ನಿರಂಕುಶವಾದಿಗಳಿಂದ ದೇಶದ ಜನತೆಯ ಮೂಲಭೂತ ಹಕ್ಕುಗಳೇ ಹರಣವಾದಾಗ ಇದರ ಸಂರಕ್ಷಣೆಗೆ ನಿಜವಾದ ನೆಲೆ ಎಂದರೆ ಈ ದೇಶದ ಸರ್ವೋನ್ನತ ನ್ಯಾಯ ಸ್ಥಾನವಾದ ಸುಪ್ರೀಂಕೋರ್ಟ್ ಮಾತ್ರ.

ಬೇಲಿಯೇ ಎದ್ದು ಹೊಲ ಮೇಯಬಾರದು.. ಇದು ನಿರ್ಭೀತ ಮತ್ತು ನಿರ್ವಂಚನೆಯ ಪ್ರಜಾತಂತ್ರ ಸಂರಕ್ಷಣೆಗೆ ಅನ್ವಯಿಸುವಂತಹ ಮಾತು. ಪ್ರಜೆಗಳನ್ನು ಆಳುವ ಕಳ್ಳನಾಗಬಾರದು. ಅವನು ಪ್ರಜಾಹಿತ ರಕ್ಷಕನಾಗಬೇಕೇ ವಿನಹ ಪ್ರಜಾಕಂಟಕನಾಗಬಾರದು. ಭಾರತದ ಪ್ರಜಾತಂತ್ರಕ್ಕೆ ಸುದೀರ್ಘ ಹಿನ್ನೆಲೆ ಇದೆ. ಇದಕ್ಕೆ ಸಂವಿಧಾನದ ಸುಭದ್ರ ನೆಲೆಗಟ್ಟು ಇದೆ. ಇಲ್ಲಿ ಪ್ರಜಾಸದನಕ್ಕೆ ಕಾಲಿಕ ವಾಗಿ ಚುನಾವಣೆಗಳನ್ನು ನಡೆಸುವ ಹೊಣೆಗಾರಿಕೆಯ ಚುನಾವಣೆ ಆಯೋಗವಿದೆ. ಈ ಆಯೋಗವು ಯಾವ ಸರ್ಕಾರದ ಅಥವಾ ಯಾವುದೇ ರಾಜಕೀಯ ಪಕ್ಷದ ಅಧೀನವಲ್ಲ. ಅರ್ಥಾತ್ ಚುನಾವಣೆ ಆಯೋಗ ಸರ್ಕಾರದ ಇಲಾಖೆಯಲ್ಲ. ಆದರೆ ಕೇಂದ್ರ ಚುನಾವಣೆ ಆಯೋಗದ ಕೆಲವೊಂದು ವಿದ್ಯಮಾನಗಳನ್ನು ಕಂಡಾಗ ದೇಶದ ಜನತೆ ಬೆಚ್ಚಿ ಬೀಳುವಂತಾಗಿದೆ. ದೇಶದ ಮುಕ್ತ ಹಾಗೂ ಪ್ರಾಮಾಣಿಕ ಚುನಾವಣೆ ವ್ಯವಸ್ಥೆಗೆ ಕಾಯಂ ಮೊಳೆ ಹೊಡೆಯುವಂತಾಗಿದೆ.

ಕೇಂದ್ರ ಚುನಾವಣೆ ಆಯೋಗವು ಕೈಗೊಂಡಿರುವ ಬಹುತೇಕ ಕ್ರಮಗಳಿಂದು ದೇಶದ ಜನತೆ ಅನುಮಾನವಾಗಿ ನೋಡುವಂತಾಗಿದೆ. ಎಸ್ ಐ ಅರ್ ಮತ್ತು ಕ್ಷೇತ್ರ ಮರುವಿಂಗಡಣೆ ಮತ್ತು ಇವಿಎಂಗಳ ಬಳಕೆ ವಿಚಾರದಲ್ಲಿ ದೇಶದ ಜನತೆ ಮತ್ತು ವಿಪಕ್ಷಗಳು ಬಹಳ ದಿನಗಳಿಂದಲೂ ಶಂಕೆ ವ್ಯಕ್ತಪಡಿಸುತ್ತಿರುವುದು ಗಮನಾರ್ಹ. ಆದರೆ ಇದು ಕೇವಲ ಉಡಾಫೆ ಎಂದು ಚುನಾವಣೆ ಆಯೋಗದ ಅಧಿಕಾರ ವರ್ಗ ತಳ್ಳಿ ಹಾಕಿದ್ದು ಕಳವಳಕಾರಿ. ಬೆಂಕಿ ಇಲ್ಲದೆ ಹೊಗೆಯಾಡುವುದು ಸಾಧ್ಯವಿಲ್ಲ. ಈ ದಿಶೆಯಲ್ಲಿ ಕೇಂದ್ರ ಮುಖ್ಯ ಚುನಾವಣೆ ಆಯುಕ್ತರ ಏಕಪಕ್ಷೀಯ ತೀರ್ಮಾನಗಳು ಆಘಾತಕಾರಿ. ಮುಖ್ಯ ಚುನಾವಣೆ ಆಯುಕ್ತರಿಗೆ ಮೆಜಾರಿಟಿ ತೀರ್ಮಾನವನ್ನು ತಳ್ಳಿ ಹಾಕಿ ತಮ್ಮದೇ ಆದ ತೀರ್ಮಾನವನ್ನು ಪ್ರಕಟಿಸುವ ಪರಮಾಧಿಕಾರ ಇದೆಯೇ ? ಇದು ಸಂವಿಧಾನಬಾಹಿರವಲ್ಲವೇ ? ಸುಪ್ರೀಂಕೋಟ್ ತೀರ್ಪುಗಳು ಕೂಡಾ ಮೆಜಾರಿಟಿ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಆಧರಿಸಿದೆ . ಆದರೆ ಆಯೋಗದ ವಿಚಾರದಲ್ಲಿ ಪ್ರಸಕ್ತ ತಲೆದೋರಿದ ಕೆಲವೊಂದು ವಿದ್ಯಮಾನಗಳನ್ನು ಕಂಡಾಗ ಎಲ್ಲಿಯೋ ಆಯೋಗದ ಮುಖ್ಯಸ್ಥರು ಆಡಳಿತರೂಢ ಪಟ್ಟ ಭದ್ರರ ಹಿತಾಸಕ್ತಿಯನ್ನು ಕಾಪಾಡಲು ಟೊಂಕಕಟ್ಟಿದಂತೆ ಭಾಸವಾಗುತ್ತದೆ .

ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಭ್ರಷ್ಟ ಮಾರ್ಗಗಳ ಮೂಲಕ ಮೆಜಾರಿಟಿಯನ್ನು ಹೇಗೆ ವ್ಯವಸ್ಥಿತ ರೀತಿಯಲ್ಲಿ ದೋಚಬಹುದು ಮತ್ತು ಇದನ್ನು ಹೇಗೆ ಹೈಜಾಕ್ ಮಾಡಬಹುದು ಎಂಬುದಕ್ಕೆ ಆಯೋಗದ ಇಂದಿನ ವಿದ್ಯಮಾನಗಳು ನಿದರ್ಶನ. ಈ ದಿಶೆಯಲ್ಲಿ ಇಲ್ಲಿಯವರೆಗೆ ರಾಹುಲ್‌ಗಾಂಧಿ, ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಮಾಡಿರುವ ಆರೋಪಗಳು ಮತ್ತು ವ್ಯಕ್ತಪಡಿಸಿದ ಆತಂಕಗಳಲ್ಲಿ ಹುರುಳಿಲ್ಲದೆ ಇಲ್ಲ ಎಂಬುದು ಮೇಲ್ನೋಟಕ್ಕೆ ಖಾತರಿಯಾಯಿತು. ಬೆಕ್ಕು ಕಣ್ ಮುಚ್ಚಿ ಹಾಲು ಕುಡಿದರೂ, ಮುಂದೊಂದು ದಿನ ಕದ್ದು ಹಾಲು ಕುಡಿದ ಬೆಕ್ಕಿನ ನಿಜವಾದ ಬಣ್ಣವಂತೂ ಬಯಲಾಗುವುದು ಖಂಡಿತ. ಇದಕ್ಕೆ ಈ ದೇಶದ ಇತಿಹಾಸವೇ ಸಾಕ್ಷಿ. ದೇಶದ ಜನತೆಯ ಮೂಲಭೂತ ಹಕ್ಕುಗಳೇ ಹರಣವಾಗಿರುವಾಗ ಇದರ ಸಂರಕ್ಷಣೆಗೆ ಸರ್ವೋನ್ನತ ನ್ಯಾಯ ಸ್ಥಾನವಾದ ಸುಪ್ರೀಂಕೋರ್ಟ್ ಒಂದೇ ಭಾರತೀಯ ಪೌರನಿಗೆ ಆಶಾಕಿರಣ.

Related Posts

Leave a Reply

Your email address will not be published. Required fields are marked *