Wednesday, November 11, 2026
Menu

ಸಂಪುಟ ಸಭೆಯಲ್ಲಿ ಸಮಗ್ರ ವಿಮಾನಯಾನ ನೀತಿ ಮಂಡನೆ: ಸಚಿವ ಎಂ.ಬಿ. ಪಾಟೀಲ

ಉದಯಕಾಲ ನ್ಯೂಸ್, ಬೆಂಗಳೂರು: ನಾಗರಿಕ ವಿಮಾನಯಾನ ಕ್ಷೇತ್ರದ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ರಾಜ್ಯ ಸರ್ಕಾರವು ಅತ್ಯಂತ ಸಮಗ್ರವಾದ ವಿಮಾನಯಾನ ನೀತಿಯನ್ನು ರೂಪಿಸಿದ್ದು, ಈ ಹೊಸ ನೀತಿಯನ್ನು ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೇ ವಿಮಾನ ನಿಲ್ದಾಣಗಳ ನಿರ್ವಹಣೆ, ಅಗತ್ಯ ಅನುದಾನ, ವಯಬಿಲಿಟಿ ಗ್ಯಾಪ್ ಫಂಡಿಂಗ್ ಹಾಗೂ ಸಮರ್ಥ ಕಾರ್ಯಾಚರಣೆ ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಈ ನೀತಿಯಲ್ಲಿ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗ ಏರ್‌ಪೋರ್ಟ್ ಸ್ಥಗಿತಕ್ಕೆ ಉಡಾನ್ ಯೋಜನೆಯ ವೈಫಲ್ಯವೇ ಕಾರಣ

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಸ್ಥಗಿತಗೊಂಡಿರುವ ಕುರಿತು ಸಂಸದ ಬಿ.ವೈ. ರಾಘವೇಂದ್ರ ಅವರ ಟೀಕೆಗೆ ತಿರುಗೇಟು ನೀಡಿದ ಸಚಿವರು, ಇದು ಕೇಂದ್ರ ಸರ್ಕಾರದ ‘ಉಡಾನ್’ ಯೋಜನೆಯ ದೋಷಗಳಿಂದ ಉಂಟಾಗಿದೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರದ ನೀತಿಗಳಿಂದಾಗಿ ದೇಶಾದ್ಯಂತ ಸುಮಾರು 17 ವಿಮಾನ ನಿಲ್ದಾಣಗಳು ಸ್ಥಗಿತಗೊಂಡಿವೆ. ಶಿವಮೊಗ್ಗ, ರಾಯಚೂರು ಹಾಗೂ ವಿಜಯಪುರ ವಿಮಾನ ನಿಲ್ದಾಣಗಳನ್ನು ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿ ಕೇಂದ್ರಕ್ಕೆ ನೀಡಿ ರಾಜ್ಯ ಸರ್ಕಾರ ನಯಾಪೈಸೆ ಕಳೆದುಕೊಳ್ಳುವ ಬದಲು, ನಾವೇ ಸ್ವತಃ ನಿರ್ವಹಿಸಲು ಮುಂದಾಗಿದ್ದೇವೆ. ಕಲಬುರಗಿ ವಿಮಾನ ನಿಲ್ದಾಣಕ್ಕೂ ಕೆಕೆಆರ್‌ಡಿಬಿ ಮತ್ತು ರಾಜ್ಯ ಸರ್ಕಾರದ ಅನುದಾನದಿಂದ ಮರುಜೀವ ನೀಡಲಾಗಿದೆ. ಸಂಸದ ರಾಘವೇಂದ್ರಗೆ ತಾಕತ್ತಿದ್ದರೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ಕೇಂದ್ರದಿಂದ ಹಣ ತರಲಿ ಎಂದು ಸವಾಲು ಹಾಕಿದರು.

ಎಥೆನಾಲ್ ಹಗರಣಕ್ಕೆ ನಿತಿನ್ ಗಡ್ಕರಿಯೇ ಹೊಣೆ

ಪೆಟ್ರೋಲ್‌ನಲ್ಲಿ ಅಳತೆ ಮೀರಿ ಎಥೆನಾಲ್ ಮಿಶ್ರಣ ಮಾಡುತ್ತಿರುವುದರಿಂದ ವಾಹನಗಳಿಗೆ ಆಗುತ್ತಿರುವ ಹಾನಿ ಹಾಗೂ ಗೊಂದಲಗಳಿಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೇ ನೇರ ಕಾರಣ ಎಂದು ಎಂ.ಬಿ. ಪಾಟೀಲ ಗಂಭೀರ ಆರೋಪ ಮಾಡಿದರು.ಏಕಾಏಕಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರಿಂದಾಗಿ ಕಲಬೆರಕೆ ಪೆಟ್ರೋಲ್‌ನಿಂದ ವಾಹನಗಳ ಮೈಲೇಜ್ ಕುಸಿದು ಜನರಿಗೆ ನಷ್ಟವಾಗುತ್ತಿದೆ. ಎಥೆನಾಲ್‌ ಹಗರಣದ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಮರ್ಥನೆ ಮಾಡಿಕೊಳ್ಳುವುದನ್ನು ಬಿಟ್ಟು ಸತ್ಯವನ್ನರಿಯಲಿ. ರಾಜ್ಯದ 67 ಪೆಟ್ರೋಲ್ ಬಂಕ್‌ಗಳ ಮಾದರಿಗಳನ್ನು ಕೇಂದ್ರದ ಪ್ರಯೋಗಾಲಯಗಳಿಗೇ ಕಳುಹಿಸಿ ಪರೀಕ್ಷಿಸಲಾಗಿದೆ ಎಂದರು.
#MBPatil #KarnatakaAviationPolicy #ShivamoggaAirport #UdanScheme #EthanolScam #NitinGadkari #KarnatakaNews #UdayakalaNews

Related Posts

Leave a Reply

Your email address will not be published. Required fields are marked *