Menu

ಭೀಕರ ಬೋಟ್ ದುರಂತ: ದಡಕ್ಕೆ ತೇಲಿಬಂದ ಶವಗಳು

ಉದಯಕಾಲ ನ್ಯೂಸ್, ಚೆನ್ನೈ: ಆಂಧ್ರಪ್ರದೇಶದ ಕರಾವಳಿ ಭಾಗಕ್ಕೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಸಂಭವಿಸಿದ ಭೀಕರ ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ತಮಿಳುನಾಡಿನ ಎಲ್ಲ 9 ಮೀನುಗಾರರ ಮೃತದೇಹಗಳು ಪತ್ತೆಯಾಗಿವೆ. ಭಾನುವಾರದಂದು ಕೊನೆಯ ಎರಡು ಮೃತದೇಹಗಳು ಸಮುದ್ರದ ಅಲೆಗಳ ಮೂಲಕ ದಡಕ್ಕೆ ತೇಲಿಬಂದಿದ್ದು, ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿ ಚೆನ್ನೈಗೆ ರವಾನಿಸಲಾಗಿದೆ. ಈ ದುರ್ಘಟನೆಯು ತಮಿಳುನಾಡಿನ ಮೀನುಗಾರಿಕಾ ವಲಯದಲ್ಲಿ ಮತ್ತು ಮೃತರ ಕುಟುಂಬಗಳಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

ಎಂಜಿನ್ ವೈಫಲ್ಯದಿಂದ ಅನಾಹುತ

ಅಕ್ಟೋಬರ್ 29ರಂದು ಚೆನ್ನೈನ ಪ್ರಸಿದ್ಧ ಕಾಸಿಮೇಡು ಮೀನುಗಾರಿಕಾ ಬಂದರಿನಿಂದ ಸೆಲ್ವಳಗನ್ ಎಂಬುವರಿಗೆ ಸೇರಿದ ಮೋಟಾರ್ ಬೋಟ್‌ನಲ್ಲಿ ದೋಣಿ ಚಾಲಕ ಸೂರ್ಯ ಸೇರಿದಂತೆ ಒಟ್ಟು ಒಂಬತ್ತು ಮಂದಿ ಮೀನುಗಾರರು ಆಳ ಸಮುದ್ರದ ಮೀನುಗಾರಿಕೆಗೆ ಪ್ರಯಾಣ ಬೆಳೆಸಿದ್ದರು. ಆಂಧ್ರಪ್ರದೇಶದ ನಿಜಾಮಪಟ್ಟಣಂ ಸಮೀಪ ಮೀನುಗಾರಿಕೆಯಲ್ಲಿ ತೊಡಗಿದ್ದಾಗ, ಹವಾಮಾನ ವೈಪರೀತ್ಯ ಹಾಗೂ ಚಂಡಮಾರುತದ ಭೀತಿಯಿಂದ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿನ ಬಂದರಿನಲ್ಲಿ ಬೋಟ್ ನಿಲ್ಲಿಸಲಾಗಿತ್ತು.

ನಂತರ ಪರಿಸ್ಥಿತಿ ತಿಳಿಯಾದ ಬಳಿಕ ಅವರು ಮತ್ತೆ ಸಮುದ್ರಕ್ಕೆ ಇಳಿದು ಮೀನುಗಾರಿಕೆ ಮುಂದುವರೆಸಿದ್ದರು. ಆದರೆ ದುರೈದೃಷ್ಟವಶಾತ್, ಸಮುದ್ರದ ಮಧ್ಯಭಾಗದಲ್ಲಿ ಬೋಟ್‌ನ ಎಂಜಿನ್ ಹಠಾತ್ ಕೈಕೊಟ್ಟಿದೆ. ಈ ಕುರಿತು ನವೆಂಬರ್ 3ರಂದು ಮುಂಜಾನೆ 3:30ರ ಸುಮಾರಿಗೆ ಸಮೀಪದಲ್ಲಿದ್ದ ಮತ್ತೊಂದು ಬೋಟ್‌ಗೆ ವೈರ್‌ಲೆಸ್ ಮೂಲಕ ಮಾಹಿತಿ ನೀಡಿದ್ದ ಮೀನುಗಾರರು ಸಂಕಷ್ಟದಲ್ಲಿದ್ದೇವೆ ಎಂದು ತಿಳಿಸಿದ್ದರು. ತದನಂತರ ಅವರ ಸಂಪರ್ಕ ಸಂಪೂರ್ಣವಾಗಿ ಕಟ್ ಆಗಿದ್ದು, ಯಾರೊಬ್ಬರನ್ನೂ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.

ಕಾವಲು ಪಡೆಯ ತೀವ್ರ ಶೋಧ

ಮೀನುಗಾರರು ನಾಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಜಂಟಿಯಾಗಿ ಶೋಧ ಕಾರ್ಯವನ್ನು ಯುದ್ಧೋಪಾಥಿಯಲ್ಲಿ ಆರಂಭಿಸಿದ್ದರು. ಹೆಲಿಕಾಪ್ಟರ್‌ಗಳು ಮತ್ತು ಗಸ್ತು ಹಡಗುಗಳನ್ನು ಬಳಸಿ ಕಡಲಿನಲ್ಲಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಇದರ ಫಲವಾಗಿ ಹಂತ ಹಂತವಾಗಿ ಆಂಧ್ರಪ್ರದೇಶದ ಒಂಗೋಲ್ ಹಾಗೂ ಇತರೆ ಕರಾವಳಿ ಭಾಗಗಳಲ್ಲಿ ಮೀನುಗಾರರ ಮೃತದೇಹಗಳು ದಡಕ್ಕೆ ತೇಲಿಬರಲಾರಂಭಿಸಿದವು.

ಮೊದಲ ಹಂತದಲ್ಲಿ ಮೋಹನ್, ಸೂರ್ಯ, ಮುರುಗನ್, ವಿಜಯಕಾಂತ್, ಕುಪ್ಪುಸಾಮಿ, ಕುಪ್ಪನ್ ಮತ್ತು ಅರವಿಂದ್ ಸೇರಿದಂತೆ 7 ಜನರ ಮೃತದೇಹಗಳು ಪತ್ತೆಯಾಗಿದ್ದು, ಅವುಗಳನ್ನು ಗುರುತಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಉಳಿದ ಇಬ್ಬರು ಮೀನುಗಾರರಿಗಾಗಿ ಹುಡುಕಾಟ ಮುಂದುವರೆಸಿದ್ದ ರಕ್ಷಣಾ ತಂಡಕ್ಕೆ, ಭಾನುವಾರ ಆಂಧ್ರಪ್ರದೇಶದ ಕೊತ್ತಪಟ್ಟಣಂ ಬಳಿಯ ಲಕ್ಷ್ಮೀಪುರಂ ಬೀಚ್‌ನಲ್ಲಿ ಮತ್ತಿಬ್ಬರ ಶವಗಳು ತೇಲಿಬಂದಿರುವುದು ಪತ್ತೆಯಾಗಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ಅವು ನಾಪತ್ತೆಯಾಗಿದ್ದ ರಾಜೇಶ್ ಹಾಗೂ ನಾರಾಯಣನ್ ಅವರ ಶವಗಳು ಎಂದು ದೃಢಪಡಿಸಿದರು.

ಸ್ಥಳೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿದ ನಂತರ, ಆ ಇಬ್ಬರ ಮೃತದೇಹಗಳನ್ನು ಸಹ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ವಿಶೇಷ ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡುವ ಮೂಲಕ ಎಲ್ಲಾ 9 ಮೀನುಗಾರರ ಪಾರ್ಥೀವ ಶರೀರಗಳನ್ನು ಅವರ ಸ್ವಂತೂರು ಹಾಗೂ ಚೆನ್ನೈಗೆ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದ್ದು, ಕಾಸಿಮೇಡು ಪ್ರದೇಶದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

#TamilNaduFishermen #BoatTragedy #AndhraPradeshCoast #CoastGuard #Kasimedu #UdayakalaNews

Related Posts

Leave a Reply

Your email address will not be published. Required fields are marked *