Wednesday, November 11, 2026
Menu

ವೀರಪ್ಪ ಮೊಯ್ಲಿ ಸಾರಥ್ಯದಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಘೋಷಣೆ

ಉದಯಕಾಲ ನ್ಯೂಸ್, ಮೈಸೂರು: ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ, 2027ರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಾಹಿತಿ ಡಾ. ಎಂ. ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ‘ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಮೈಸೂರಿನ ಜೆಎಸ್ಎಸ್ ವಿದ್ಯಾಸಂಸ್ಥೆಯಲ್ಲಿ ವೀರಪ್ಪ ಮೊಯ್ಲಿ ಅವರ ‘ವಿಶ್ವಸಂಸ್ಕೃತಿಯ ಮಹಾಯಾನ’ (ಸಂಪುಟ 4) ಗದ್ಯ ಮಹಾಕಾವ್ಯವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಜಕೀಯ ಅಧಿಕಾರ ಸೀಮಿತ, ಸಾಹಿತ್ಯದ ಪ್ರಭಾವ ಶಾಶ್ವತ

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಜಕಾರಣ ಮತ್ತು ಸಾಹಿತ್ಯದ ನಂಟನ್ನು ಸ್ಮರಿಸಿದ ಡಿಕೆಶಿ ರಾಜಕೀಯದಲ್ಲಿ ಅಧಿಕಾರದ ಅವಧಿ ಸೀಮಿತವಾಗಿರುತ್ತದೆ ಮತ್ತು ನಾಯಕರ ಹೆಸರುಗಳು ಕಾಲಕ್ರಮೇಣ ಮರೆಯಾಗಬಹುದು. ಆದರೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರು ಮತ್ತು ಅವರ ಚಿಂತನೆಗಳು ಎಂದೆಂದಿಗೂ ಶಾಶ್ವತವಾಗಿ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು. ಮನುಷ್ಯನನ್ನು ನಿಜವಾದ ಮಾನವನನ್ನಾಗಿ ರೂಪಿಸುವಲ್ಲಿ ಶಿಕ್ಷಣ, ಧರ್ಮ ಮತ್ತು ಸಾಹಿತ್ಯ ಅತ್ಯಂತ ಶಕ್ತಿಶಾಲಿ ಸಾಧನಗಳಾಗಿವೆ. ಕತ್ತಲೆಯನ್ನು ಹೋಗಲಾಡಿಸಲು ಬೆಳಕು ಎಷ್ಟು ಮುಖ್ಯವೋ, ಅಜ್ಞಾನವನ್ನು ದೂರ ಮಾಡಲು ಸಾಹಿತ್ಯ ಮತ್ತು ಸಂಸ್ಕೃತಿ ಅಷ್ಟೇ ಅಗತ್ಯ ಎಂದು ಅವರು ಹೇಳಿದರು.

ವೀರಪ್ಪ ಮೊಯ್ಲಿ ಕೊಡುಗೆ ಅನನ್ಯ

ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಸಾಧನೆಗಳನ್ನು ಕೊಂಡಾಡಿದ ಅವರು, ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರ ಎರಡನ್ನೂ ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಅಪರೂಪದ ವ್ಯಕ್ತಿ ಮೊಯ್ಲಿ ಎಂದರು. 1985ರಲ್ಲಿ ಯುವ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರಕಿಸಿಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ನಾಲ್ಕನೇ ತರಗತಿಯಲ್ಲಿದ್ದಾಗಲೇ ಕವಿತೆ ಬರೆಯಲು ಆರಂಭಿಸಿದ ಅವರು, 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಅವರ ‘ರಾಮಾಯಣ ಮಹಾನ್ವೇಷಣಂ’ ಕೃತಿಗೆ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಲಭಿಸಿದೆ. ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ಅವರಿಗೆ ಜ್ಞಾನಪೀಠ ಸೇರಿದಂತೆ ಇನ್ನಷ್ಟು ಉನ್ನತ ಪ್ರಶಸ್ತಿಗಳು ದೊರೆಯಲಿ ಎಂದು ಹಾರೈಸಿದರು. ಮುಂಬರುವ ಬಜೆಟ್‌ನಲ್ಲಿ ಸಮ್ಮೇಳನದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
#VishwaKannadaSahityaSammelana #CMDKShivakumar #VeerappaMoily #MysuruNews #KannadaLiterature #KarnatakaPolitics #UdayakalaNews

Related Posts

Leave a Reply

Your email address will not be published. Required fields are marked *