Saturday, September 26, 2026
Menu

ಮೈಸೂರು ದಸರಾದಲ್ಲಿ ಅ.18, 19 ರಂದು ಕಂಬಳ, 160 ಜೋಡಿ ಕೋಣ: ಶಾಸಕ ಅಶೋಕ ರೈ

ಮೈಸೂರು ದಸರಾ ಉತ್ಸವಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕಂಬಳದ ಮೆರುಗು ದೊರೆಯಲಿದ್ದು, ಅ.18 ಮತ್ತು 19ರಂದು ಮೈಸೂರಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ‘ವಿಜಯ ದಶಮಿ’ ಹೆಸರಿನಲ್ಲಿ ಕಂಬಳ ಆಯೋಜಿಸಲಾಗಿದೆ. ಸುಮಾರು 20 ಎಕರೆ ಪ್ರದೇಶದಲ್ಲಿ ನಡೆಯಲಿರುವ ಕಂಬಳಕ್ಕೆ 150ರಿಂದ 160 ಜೋಡಿ ಕೋಣಗಳನ್ನು ಆಯ್ಕೆ ಮಾಡುವ ಉದ್ದೇಶವಿದ್ದು, ಏಕಕಾಲಕ್ಕೆ ಸಾವಿರಾರು ಮಂದಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಂಬಳ ವೀಕ್ಷಣೆಗೆ 15 ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ನಿರ್ಮಿಸಲಾಗುತ್ತಿದೆ. ಮುಖ್ಯ ವೇದಿಕೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿದ್ದು, ಎರಡು ವೇದಿಕೆಗಳಲ್ಲಿ ಗಣ್ಯರು ಹಾಗೂ ಅತಿಥಿಗಳಿಗೆ ವ್ಯವಸ್ಥೆ ಮಾಡಲಾಗುತ್ತದೆ. ಮೂರು ಅವಧಿಗಳಲ್ಲಿ ಪಾಸ್ ಮೂಲಕ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಪಾಸ್ ಇಲ್ಲದವರಿಗೂ ಕಂಬಳ ವೀಕ್ಷಿಸಲು ಪ್ರತ್ಯೇಕ ವಲಯ ನಿರ್ಮಿಸಲಾಗಿದ್ದು, ಅಲ್ಲಿ ಸುಮಾರು 5 ಸಾವಿರ ಮಂದಿಗೆ ಅವಕಾಶ ಕಲ್ಪಿಸಲಾಗುತ್ತದೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರಲಿದೆ ಎಂದು ಮಾಹಿತಿ ನೀಡಿದರು.

ಕೋಣಗಳನ್ನು ಅ.16 ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಮೈಸೂರಿಗೆ ಕರೆದೊಯ್ಯಲಾಗುವುದು. ಮಡಿಕೇರಿಯಲ್ಲಿ ವಿರಾಮ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿ, ರಾತ್ರಿ 9ರ ವೇಳೆಗೆ ಮೈಸೂರಿಗೆ ತಲುಪುವಂತೆ ಯೋಜಿಸಲಾಗಿದೆ. ಅ.17ರಂದು ಕೋಣಗಳಿಗೆ ವಿಶ್ರಾಂತಿ ನೀಡಲಾಗುವುದು. ಅ.18ರಂದು ಬೆಳಗ್ಗೆ ಉದ್ಘಾಟನೆ ಹಾಗೂ ಸಂಜೆ ಸಾರ್ವಜನಿಕ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ದೊಡ್ಡ ಜೋಡಿ ಕೋಣಗಳಿಗೆ ₹65 ಸಾವಿರ ಹಾಗೂ ಸಣ್ಣ ಜೋಡಿಗಳಿಗೆ ₹50 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಬಹುಮಾನ ಹಾಗೂ ಚಿನ್ನದ ಪದಕಗಳ ಮೊತ್ತ ಹೆಚ್ಚಿಸುವ ಬೇಡಿಕೆ ಕುರಿತು ಮೈಸೂರು ದಸರಾ ಸಮಿತಿ ನಿರ್ಧರಿಸಲಿದೆ. ಭಾಗವಹಿಸುವ ಮಾಲೀಕರಿಗೆ ಪ್ರಮಾಣಪತ್ರ, ಸ್ಮರಣಿಕೆ, ಗೌರವ, ಗುರುತಿನ ಚೀಟಿ ಹಾಗೂ ಪಾಸ್ ನೀಡಲಾಗುತ್ತದೆ. ಕೋಣಗಳಿಗೆ ವಾಸ್ತವ್ಯ, ಆಹಾರ, ನೀರು, ಶೌಚಾಲಯ, ಸ್ನಾನಗೃಹ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿ, ಸುರಕ್ಷತೆ ಹಾಗೂ ಆರೈಕೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಸುಮಾರು 48 ಗಂಟೆಗಳ ಕಾಲ ನಡೆಯುವ ಕಂಬಳ ಮೈಸೂರು ಅರಮನೆಯಿಂದ ಆರೇಳು ಕಿ.ಮೀ. ದೂರದ ವಿಶಾಲ ಪ್ರದೇಶದಲ್ಲಿ ನಡೆಯಲಿದೆ ಎಂದು ವಿವರಿಸಿದರು.

ಕಂಬಳದೊಂದಿಗೆ ಕರಾವಳಿಯ ಸಾಂಪ್ರದಾಯಿಕ ಆಹಾರ, ತುಳುನಾಡಿನ ಸಂಸ್ಕೃತಿ ಹಾಗೂ ವಿವಿಧ ವಸ್ತುಗಳನ್ನು ಪರಿಚಯಿಸಲು 4–5 ಎಕರೆ ಪ್ರದೇಶದಲ್ಲಿ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಸುಮಾರು 25 ಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ಆಶಯ ಹೊಂದಿರುವ ಆಯೋಜಕರು, ಕೋಣಗಳೊಂದಿಗೆ ಸಾರ್ವಜನಿಕರು ಛಾಯಾಚಿತ್ರ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶ ಇದೆ. ಕಂಬಳ ಅಸೋಸಿಯೇಶನ್ ರಾಜ್ಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರು ದಸರಾದಲ್ಲಿ ಕರಾವಳಿಯ ಜಾನಪದ ಕ್ರೀಡೆಗೆ ಅವಕಾಶ ನೀಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲೀಕರಿಗೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ. ದೊಡ್ಡ ಜೋಡಿ ಕೋಣಗಳಿಗೆ ₹65 ಸಾವಿರ ಹಾಗೂ ಸಣ್ಣ ಜೋಡಿ ಕೋಣಗಳಿಗೆ ₹50 ಸಾವಿರ ನೀಡಲಾಗುವುದು. ಕೋಣಗಳ ಮಾಲೀಕರ ಬೇಡಿಕೆಯ ಹಿನ್ನೆಲೆಯಲ್ಲಿ ಕಂಬಳದ ಬಹುಮಾನ ಹಾಗೂ ಚಿನ್ನದ ಪದಕಗಳ ಮೊತ್ತ ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆದಿದೆ.ಈ ಕುರಿತು ಅಂತಿಮ ನಿರ್ಧಾರವನ್ನು ಮೈಸೂರು ದಸರಾ ಸಮಿತಿ ಕೈಗೊಳ್ಳಲಿದೆ ಎಂದು ಶಾಸಕ ಅಶೋಕ ರೈ ತಿಳಿಸಿದರು.

Related Posts

Leave a Reply

Your email address will not be published. Required fields are marked *