ಹಾಸನಾಂಬ ಜಾತ್ರಾ ಮಹೋತ್ಸವ ಈ ಬಾರಿ ಅ.29ರಿಂದ ನವೆಂಬರ್ 11ರವರೆಗೆ ನಡೆಯಲಿದ್ದು, ಜಿಲ್ಲಾಡಳಿತ ಜಾತ್ರೆಯನ್ನು ನಡೆಸಲು ಎಲ್ಲ ಬಗೆಯ ಸಿದ್ಧತೆ ನಡೆಸುತ್ತಿದೆ.
ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ ನೀಡಿ, ಈ ಬಾರಿ ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ ನಡೆಯಲಿದೆ. ಅ.29ರಂದು ಗುರುವಾರ ಮ.12 ಗಂಟೆಗೆ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಿದೆ. ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಅ.3ರಿಂದ ನ.10ರವರೆಗೆ ಅಂದರೆ 12 ದಿನ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ. ನ.11ರಂದು ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ಹಾಸನಾಂಬಾ ಜಾತ್ರಾ ಮಹೋತ್ಸವಕ್ಕಾಗಿ ಸೆ.26ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಪೋಸ್ಟರ್ ಬಿಡುಗಡೆಗೊಳಿಸಿ ವೆಬ್‌ಸೈಟ್ ಲಾಂಚ್ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಈ ಬಾರಿ ಹಾಸನ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಬರದ ನಡುವೆ ಶ್ರದ್ಧಾ, ಭಕ್ತಿ, ಸಡಗರದಿಂದ ಜಾತ್ರಾ ಮಹೋತ್ಸವ ನಡೆಸಲಾಗುವುದು. ಈಗಾಗಲೇ ಅನೇಕ ಸಮಿತಿ ರಚಿಸಿದ್ದು, ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದ್ದೇವೆ. ಆಹಾರ ಮೇಳ, ಚಿತ್ರಸಂತೆ, ಸಾಂಸ್ಕೃತಿಕ, ಸಾಹಿತ್ಯ ವೈಭವವನ್ನು ಜನತೆಗೆ ತಲುಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದಿದ್ದಾರೆ.


