ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ. ನಾವು ಒಂದು ವರ್ಷಗಳ ಮುಂಚಿತವಾಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಕೆಲಸ ಮಾಡಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಸಂಬಂಧ ಸಚಿವರು ಹಾಗೂ ಪಕ್ಷದ ಶಾಸಕರ ಸಭೆ ಬಳಿಕ ಕೆಪಿಸಿಸಿ ಕಚೇರಿ ಬಳಿ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಈಗ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದೇ ಚುನಾವಣೆ ಕುರಿತು ಶಾಸಕರೊಂದಿಗೆ ಸಭೆ ನಡೆಸಿ ಮಾರ್ಗದರ್ಶನ ನೀಡಲಾಗಿದೆ. ಎಲ್ಲಾ ಮಂತ್ರಿಗಳು ಹಾಗೂ ಶಾಸಕರು ಜವಾಬ್ದಾರಿ ವಹಿಸಿಕೊಂಡು ಚುನಾವಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ದೆಹಲಿ ಪ್ರಯಾಣದ ಬಗ್ಗೆ ಕೇಳಿದಾಗ, ಭೇಟಿಗೆ ಸಮಯವಕಾಶ ಕೇಳಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಸಮಯ ನೀಡಿದ ಬಳಿಕ ಸರ್ವಪಕ್ಷ ಸಭೆ ಕರೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಸರ್ವಪಕ್ಷ ನಿಯೋಗ ದೆಹಲಿಗೆ ತೆರಳುವ ಬಗ್ಗೆ ಕೇಳಿದಾಗ, ಬರ ಪರಿಹಾರ ಮತ್ತು ಕೇಂದ್ರದ ನೆರವಿನ ಕುರಿತು ಚರ್ಚಿಸಲು ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲಾ ಪಕ್ಷದ ನಾಯಕರು ಸಮ್ಮತಿಸಿದ್ದಾರೆ ಎಂದು ಹೇಳಿದರು.


