ರಾಜ್ಯ ಸರ್ಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಹೊಸ ಹುದ್ದೆಗಳಿಗೆ ನೇಮಕಗೊಳಿಸಿ ಆದೇಶಿಸಿದೆ. ಕೃಷಿ, ಉಪಮುಖ್ಯಮಂತ್ರಿಗಳ ಕಚೇರಿ, ಖಜಾನೆ, ಗ್ರಾಮೀಣಾಭಿವೃದ್ಧಿ, ವಿದ್ಯುತ್ ಕಂಪನಿಗಳು ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಹೊಸ ಬದಲಾವಣೆಗಳಾಗಿವೆ.
ಡಾ. ತ್ರಿಲೋಕ್ ಚಂದ್ರ ಕೆ.ವಿ. ಐಎಎಸ್ ಅವರನ್ನು ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಸಾಂಖ್ಯಿಕ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಿ ಕೃಷಿ ಇಲಾಖೆಯಲ್ಲಿ ಸರ್ಕಾರದ
ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.
ಡಾ. ರಾಕೇಶ್ ಕುಮಾರ್ ಕೆ ಐಎಎಸ್ ಅವರನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಳಿಸಿ ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆ ವಹಿಸಲಾಗಿದೆ. ಬೆಂಗಳೂರು ಸರ್ವೇ ಸೆಟಲ್‌ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಆಯುಕ್ತ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
ಡಾ. ಅರುಂಧತಿ ಚಂದ್ರಶೇಖರ್ ಐಎಎಸ್ ಅವರನ್ನು ಪಂಚಾಯತ್ ರಾಜ್ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿ ಬೆಂಗಳೂರು ಖಜಾನೆ ಆಯುಕ್ತ ಹುದ್ದೆ ನೀಡಲಾಗಿದೆ. ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಹೊಸ ಜವಾಬ್ದಾರಿ ವಹಿಸಿದ್ದಾರೆ.
ಪಾಟೀಲ್ ಯಲಗೌಡ ಶಿವನಗೌಡ ಐಎಎಸ್ ಅವರನ್ನು ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದೇಶಕ ಹುದ್ದೆಯಿಂದ ವರ್ಗಾವಣೆಗೊಳಿಸಿ ಬೆಂಗಳೂರು ಗ್ರಾಮೀಣಾಭಿವೃದ್ಧಿ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಪಂಚಾಯತ್ ರಾಜ್ ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.
ವೈಶಾಲಿ ಎಂ.ಎಲ್ ಐಎಎಸ್ ಅವರನ್ನು ಹೆಸ್ಕಾಮ್ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಿಂದ ವರ್ಗಾವಣೆ ಮಾಡಿ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಕ ಮಾಡಲಾಗಿದೆ.


