Monday, September 21, 2026
Menu

ಪೌರಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಎಂಗೆ ಮನವಿ ಸಲ್ಲಿಸಿದ ಪತ್ರಕರ್ತರು

ರಾಜ್ಯದ ಪೌರಕಾರ್ಮಿಕರ ಖಾಯಂಗೊಳಿಸುವಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ “ಪೌರ ಕಾರ್ಮಿಕರಿಗಾಗಿ ಪತ್ರಕರ್ತರು” ಬಳಗ  ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಪೌರಾಡಳಿತ ಸಚಿವ ಹೆಚ್ ಸಿ ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಹಿರಿಯ ಪತ್ರಕರ್ತರಾದ ಸುಭಾಷ್ ಹೂಗಾರ್, ಧರಣೀಶ್ ಬೂಕನಕೆರೆ, ಎನ್ ರವಿಕುಮಾರ್ ಟೆಲೆಕ್ಸ್, ಮಾರುತಿ ಪಾವಗಡ, ಟಿ .ಗುರುರಾಜ್ ,ಮಹಾಂತೇಶ ಹಿರೇಮಠ, ಸೋಮಶೇಖರ್ ಕವಚೂರು  ನೇತೃತ್ವದ ನಿಯೋಗ  ಮುಖ್ಯಮಂತ್ರಿ  ಮತ್ತು ಪೌರಾಡಳಿತ ಸಚಿವ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

ನಾಗರಿಕ ಸಮಾಜದ ಆರೋಗ್ಯ ಮತ್ತು ಅಭಿವೃದ್ಧಿಯಲ್ಲಿ ಪೌರಕಾರ್ಮಿಕರ (Sanitary workers) ಶ್ರಮ ಅಪೂರ್ವವಾದದ್ದು. ಈ ಸಮಾಜದ ಆರೋಗ್ಯ ರಕ್ಷಣೆಗಾಗಿ ತಮ್ಮ ಆರೋಗ್ಯವನ್ನು ಮುಡಿಪಾಗಿಟ್ಟು ಬದುಕುತ್ತಿರುವ ಪೌರಕಾರ್ಮಿಕರ ಸ್ವಚ್ಛತಾ ವಲಯ ಸರ್ಕಾರದ ಇತರೆ ಇಲಾಖೆಗಳ ಯಾವ ನೌಕರರಿಗೂ ಮಿಗಿಲಾದ ಸೇವೆಯನ್ನೇ ಮಾಡುತ್ತಿದೆ. ಆದರೆ ಈ ವಲಯವನ್ನು ಸರ್ಕಾರಗಳು ಆದ್ಯತೆಯಿಂದ ಕಾಣದಿರುವುದು ವಿಪರ್ಯಾಸ. ಈ ನಾಗರೀಕ ಸಮಾಜ ಕೂಡ ಪೌರಕಾರ್ಮಿಕರನ್ನು ಅಸ್ಪೃಶ್ಯರಂತೆ ಕಾಣುತ್ತಾ ಬಂದಿದೆ. ಇದು ಅತ್ಯಂತ ಅಮಾನವೀಯ ಸಂಗತಿ ಎಂದು ನಿಯೋಗ ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ನಮ್ಮೆಲ್ಲರ ಆರೋಗ್ಯವನ್ನು ಸದಾ ಕಾಯುತ್ತಿರುವ ಪೌರಕಾರ್ಮಿಕರ ಹಿತಾಸಕ್ತಿ ಕಾಪಾಡಲು ಮತ್ತು ಹಕ್ಕುಗಳನ್ನು ದಕ್ಕಿಸಿಕೊಡಲು ಈ ನಾಗರೀಕ ಸಮಾಜ ಕರ್ತವ್ಯ ಪ್ರಜ್ಞೆಯಿಂದಲೂ, ಅಂತಃಕರಣದಿಂದಲೂ ಮುಂದಾಗಬೇಕಿದೆ. ಇದೊಂದು ಋಣ ಸಮರ್ಪಣೆ ಎಂದರೂ ತಪ್ಪಾಗಲಾರದು. ಈ ಹಿನ್ನಲೆಯಲ್ಲಿ ಪತ್ರಕರ್ತರಾದ ನಾವುಗಳು ನಾಗರೀಕರ ಸಮಾಜದ ಬಹುಮುಖ್ಯ ಭಾಗವೇ ಅಗಿರುವ ಪೌರಕಾರ್ಮಿಕರಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿರುವ ಹಕ್ಕು ಮತ್ತು ಸವಲತ್ತುಗಳ ಈಡೇರಿಕೆಗಾಗಿ ಹೊಣೆಗಾರಿಕೆಯಿಂದಲೂ ಮತ್ತು ಮಾನವತೆಯಿಂದಲೂ ಈ ಕೆಳಕಂಡ ಬೇಡಿಕೆಗಳನ್ನು ತಮ್ಮ ಮುಂದೆ ಮಂಡಿಸುತ್ತಿದ್ದೇವೆ. ತಾವು ಸಹಾನುಭೂತಿಯಿಂದ ಈ ಬೇಡಿಕೆಗಳನ್ನು ಪರಿಗಣಿಗಣಿಸಿ ಕಾಲಮಿತಿಯೊಳಗೆ ಈಡೇರಿಸಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ನಿಯೋಗದ ಸದಸ್ಯರು ಮನವಿ ಮಾಡಿದರು.

ಮಂಡಿಸಲಾದ ಬೇಡಿಕೆಗಳು
1. ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ( ಮಹಾನಗರ ಪಾಲಿಕೆಗಳು ಸೇರಿದಂತೆ ) ನೇರ ಪಾವತಿ ಮತ್ತು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ತಕ್ಷಣವೇ ಖಾಯಂಗೊಳಿಸಬೇಕು.

2. ಪೌರಕಾರ್ಮಿಕರು ಮತ್ತು ಇತರೆ ಇಲಾಖೆಗಳ ಸರ್ಕಾರಿ ನೌಕರರ ನಡುವಿನ ತಾರತಮ್ಯವನ್ನು ನಿವಾರಿಸಿ. ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದೆ ಘೋಷಿಸಬೇಕು.

3. ಪೌರಕಾರ್ಮಿಕರಿಗೆ ಪ್ರತ್ಯೇಕ ವೇತನ ಮಂಡಳಿ ರಚಿಸಿ, ಮೂಲವೇತನವನ್ನು ಹೆಚ್ಚಳ ಮಾಡಬೇಕು.

4. ಪೌರಕಾರ್ಮಿಕರ ಆರೋಗ್ಯ ಕ್ಷಮತೆಯನ್ನು ಕಾಪಾಡಲು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಬೇಕು.

5. ನಗದು ರಹಿತ ಆರೋಗ್ಯ ಚಿಕಿತ್ಸೆಗೆ ಯೋಜನೆ ಜಾರಿಗೊಳಿಸಬೇಕು. ಕಸ ತುಂಬುವ ಸಿಬ್ಬಂದಿ, ತ್ಯಾಜ್ಯ ವಿಲೇವಾರಿ ವಾಹನ ಚಾಲಕರು, ಸಹಾಯಕರು, ಆಪರೇಟರ್ ಗಳನ್ನು ಹಾಗೂ ಒಳಚರಂಡಿ ಸ್ವಚ್ಚತಾ ಕಾರ್ಮಿಕರು ಇವರುಗಳನ್ನು ಪೌರಕಾರ್ಮಿಕರೆಂದೇ ಪರಿಗಣಿಸಿ ಅವರನ್ನು ಖಾಯಂಗೊಳಿಸಬೇಕು.

6. ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ರೂಪಕ ಅನುದಾನವನ್ನು ಮೀಸಲಿರಿಸಬೇಕು.

7. ಪೌರಕಾರ್ಮಿಕರು ಸೇವಾ ಅವಧಿಯಲ್ಲಿ ಸಾವು ಕಂಡರೆ ಅವರ ಅಂತ್ಯ ಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಬೇಕು.

8. ಈ ತಕ್ಷಣವೇ ರಾಜ್ಯದಲ್ಲಿನ ಪೌರಕಾರ್ಮಿಕರ ಸಾಮಾಜಿಕ -ಆರ್ಥಿಕ ಸ್ಥಿತಿಗತಿಗಳ ಅಧ್ಯಯನಕ್ಕೆ ಸಮಿತಿಯೊಂದನ್ನು ರಚಿಸಿ , 3 ತಿಂಗಳ ಕಾಲಮಿತಿಯೊಳಗೆ ವರದಿ ಪಡೆದು. ಅದನ್ನು ಜಾರಿಗೊಳಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು.

Related Posts

Leave a Reply

Your email address will not be published. Required fields are marked *