Menu

ಔಷಧ ಘಟಕ ಸ್ಫೋಟಕ್ಕೆ ಇಬ್ಬರು ಬಲಿ, ಉಕ್ಕು ಕಾರ್ಖಾನೆ ಸ್ಫೋಟದಲ್ಲಿ ಮೂವರ ಸಾವು

ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಔಷಧ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿರುವ ಉಕ್ಕು ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಮೂವರು ಇಂಜಿನಿಯರ್‌ಗಳು ಅಸು ನೀಗಿದ್ದಾರೆ.

ಔಷಧ ತಯಾರಿಕಾ ಘಟಕದಲ್ಲಿ ಸ್ಫೋಟಕ್ಕೆ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, ಉಕ್ಕು ಕಾರ್ಖಾನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಪೊಚಂಪಲ್ಲಿ ಮಂಡಲದ ದೋತಿಗುಡೆಂ ಗ್ರಾಮದ ಹೊರವಲಯದಲ್ಲಿರುವ ಹ್ಯಾಜೆಲೋ ಲ್ಯಾಬ್ ಕಂಪನಿಯಲ್ಲಿ ಈ ದುರಂತ ನಡೆದಿದೆ. ಸುಟ್ಟ ಗಾಯಗಳಾಗಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ಶಬ್ದ ಕೇಳಿದ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ.

ಸ್ಫೋಟದ ಬಳಿಕ ಕಂಪನಿಯ ಆವರಣದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಜೊತೆ ರಕ್ಷಣಾ ಸಿಬ್ಬಂದಿ ಹಾಗೂ ಕಾರ್ಮಿಕರು ಬೆಂಕಿ ನಂದಿಸಲು ಸಹಕರಿಸಿದರು.
ಕಂಪನಿಯಲ್ಲಿದ್ದ ರಿಯಾಕ್ಟರ್ ಸ್ಫೋಟಗೊಂಡು ದುರಂತ ಸಂಬವಿಸಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಕಂಪನಿಯಲ್ಲಿ ಕೈಗೊಳ್ಳಲಾಗಿದ್ದ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಉಕ್ಕು ಕಾರ್ಖಾನೆಯಲ್ಲಿ ಸ್ಫೋಟಕ್ಕೆ ಮೂವರು ಬಲಿ

ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿರುವ ಉಕ್ಕು ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಮೂವರು ಇಂಜಿನಿಯರ್‌ಗಳು ಅಸು ನೀಗಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಹೆಲಾಲ್ ಪ್ರದೇಶದಲ್ಲಿರುವ ಉಕ್ಕು ಕಾರ್ಖಾನೆಯ ಕ್ಯಾಪ್ಟಿವ್ ಪವರ್ ಪ್ಲಾಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಇತರ ಭಾಗಗಳಿಗೂ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಸಂಜೀವ್, ವಿನೀತ್ ಮತ್ತು ಅಭಿಷೇಕ್ ಎಂದು ಗುರುತಿಸಲಾಗಿದೆ ಎಂದು ಬರ್ಕಾಕಾನಾ ಪೊಲೀಸ್ ಠಾಣೆ ಅಧಿಕಾರಿ ಉಮಾ ಶಂಕರ್ ವರ್ಮಾ ತಿಳಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ತನಿಖೆ ಆರಂಭಿಸಲಾಗಿದ್ದು, ಬೆಂಕಿ ಟರ್ಬೈನ್ ಅಥವಾ ಪವರ್ ಪ್ಲಾಂಟ್‌ನಲ್ಲಿನ ತಾಂತ್ರಿಕ ದೋಷದಿಂದ ಸಂಭವಿಸಿರಬಹುದೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಕಾರ್ಖಾನೆ ನಿರೀಕ್ಷಕ ಮನೀಶ್ ಸಿನ್ಹಾ ಮಾತನಾಡಿ, ಕಾರ್ಖಾನೆಯ ಕ್ಯಾಪ್ಟಿವ್ ಪವರ್ ಪ್ಲಾಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *