Menu

ಹೊಸ ಮೊಬೈಲ್‌ಗಾಗಿ ಜಗಳ: ಪ್ರಪಾತಕ್ಕೆ ಜಿಗಿದ ಮಗನ ರಕ್ಷಿಸಲು ಹೋದ ತಂದೆಯೂ ಸಾವು, ಪ್ರತ್ಯಕ್ಷದರ್ಶಿ ತಾಯಿ ಆತ್ಮಹತ್ಯೆ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ  ಮಾಥೇರಾನ್‌ ಬೆಟ್ಟದಿಂದ ಯುವಕನೊಬ್ಬ ಪ್ರಪಾತಕ್ಕೆ ಹಾರಿದ್ದು, ರಕ್ಷಿಸಲು ಹೋದ ತಂದೆಯೂ ಬಿದ್ದು ಮೃತಪಟ್ಟರೆ, ಇದನ್ನು ಕಣ್ಣಾರೆ ಕಂಡ ತಾಯಿ ಕೂಡ ಅದೇ ಪ್ರಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

೧೯ ವರ್ಷದ ಯುವಕ ಕುನಾಲ್‌ ಎಂಬಾತ ಹೊಸ ಮೊಬೈಲ್‌ ಬೇಕೆಂದು ಪೋಷಕರ ಜೊತೆ ಜಗಳವಾಡಿ ತಿಸಗಾಂವ್‌ನಲ್ಲಿರುವ ಖವಾಡ್ಯಾ ಬೆಟ್ಟಕ್ಕೆ ಹೋಗಿದ್ದ. ವಿಷಯ ತಿಳಿದ ಪೋಷಕರು ಕೂಡಲೇ ಬೆಟ್ಟಕ್ಕೆ ಹೋಗಿ, ಮನೆಗೆ ಮರಳುವಂತೆ ಮನವೊಲಿಸಲು ಪ್ರಯತ್ನಿಸಿದರು. ಆತ ಬೆಟ್ಟದ ತುದಿಯಲ್ಲಿ ನಿಂತು ಕೆಳಗೆ ಹಾರುವುದಾಗಿ ಹೆದರಿಸುತ್ತ ಗಂಟೆಗಟ್ಟಲೆ ಅಲ್ಲೇ ನಿಂತಿದ್ದ. ಪ್ರವಾಸಿಗರು ಮತ್ತು ಸ್ಥಳೀಯರು ಆತನನ್ನು ಅಲ್ಲಿಂದ ಕರೆತರಲು ಪ್ರಯತ್ನ ಮಾಡಿದ್ದರು.

ಹೆತ್ತವರು ಮತ್ತು ಸ್ಥಳೀಯರು ಮೂರು ಗಂಟೆ ಸತತವಾಗಿ ಮನವೊಲಿಸಲು ಯತ್ನಿಸಿದರು. ಆತ ಬೆಟ್ಟದಿಂದ ಜಿಗಿಯುವುದಾಗಿ ಬೆದರಿಕೆ ಹಾಕುತ್ತಲೇ ಇದ್ದ, ತಂದೆಯು ಮಗನನ್ನು ರಕ್ಷಿಸಲು ಮುಂದಾದಾಗ ಹಿಂದೆ ಹೆಜ್ಜೆಯಿಟ್ಟ ಯುವಕ ಬೆಟ್ಟದಿಂದ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬೀಳುತ್ತಿದ್ದ ಮಗನನ್ನು ಕಾಪಾಡಲು ಓಡಿದ ಅಪ್ಪ ಕೂಡ ಕೆಳಗೆ ಬಿದ್ದಿದ್ದಾರೆ. ಈ ಆಘಾತಕಾರಿ ದೃಶ್ಯವನ್ನು ಕಣ್ಣಾರೆ ಕಂಡ ಆತನ ತಾಯಿ ಅದೇ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಝಲ್ತಾ ಫಾಟಾ ಪ್ರದೇಶದ ನಿವಾಸಿಗಳಾದ ಮುರಳೀಧರ್ ಚಾಂದಗುಡೆ (48), ಪತ್ನಿ ಸಂಗೀತಾ ಮತ್ತು ಮಗ ಕುನಾಲ್ ಎಂದು ಪೊಲೀಸರು ಗುರುತಿಸಿದ್ದಾರೆ.  ಹೊಸ ಮೊಬೈಲ್ ಬೇಕು ಎಂದು ಪೋಷಕರೊಂದಿಗೆ ಜಗಳವಾಡಿದ್ದ ಕುನಾಲ್, ಕೋಪಗೊಂಡು ಬೆಟ್ಟದ ಮೇಲೆ ಹೋದ ಬಳಿಕ ತಂದೆ, ತಾಯಿ, ಸ್ಥಳೀಯರು ಆತನನ್ನು ಇಳಿಸಲು ಪ್ರಯತ್ನಿ ವಿಫಲರಾದ ಬಳಿಕ ಗ್ರಾಮಸ್ಥರು, ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿ ಬೆಟ್ಟದ ಕೆಳಭಾಗದಲ್ಲಿ ಸೇಫ್ಟಿ ನೆಟ್ ಅಳವಡಿಸಲು ಯತ್ನಿಸಿದ್ದಾರೆ. ಆದರೆ ಆತ ಬೆಟ್ಟದ ಅಂಚಿನಲ್ಲಿ  ಸ್ಥಳವನ್ನು ಬದಲಾಯಿಸುತ್ತಿದ್ದುದರಿಂದ ಆ ಪ್ರಯತ್ನ ಫಲ ನೀಡಲಿಲ್ಲ.

ಮಧ್ಯಾಹ್ನ ಮುರಳೀಧರ್ ಅವರು ಮಗನನ್ನು ಸಮಾಧಾನಪಡಿಸಲು ಹತ್ತಿರ ಹೋದಾಗ ಆತ ಬೆಟ್ಟದಿಂದ ಕೆಳಗೆ ಜಿಗಿದನು. ತಂದೆಯೂ ನಿಯಂತ್ರಣ ಕಳೆದುಕೊಂಡು ಬೆಟ್ಟದ ಮೇಲಿನಿಂದ ಕೆಳಗೆ ಬಿದ್ದರು. ಗಂಡ ಮತ್ತು ಮಗ ಪ್ರಪಾತಕ್ಕೆ ಬಿದ್ದು ಮೃತಪಟ್ಟಿರುವುದನ್ನು ಕಣ್ಣಾರೆ ಕಂಡ ಸಂಗೀತಾ ತಕ್ಷಣ ಬೆಟ್ಟದಿಂದ ಜಿಗಿದಿದ್ದಾರೆ.

Related Posts

Leave a Reply

Your email address will not be published. Required fields are marked *