ಸಚಿವ ನಾಗೇಂದ್ರ ಅವರಿಂದ ಇಂತಹ ಕಾರಣಕ್ಕೆ ರಾಜಿನಾಮೆ ಕೇಳುತ್ತಿದ್ದೇವೆ ಎಂದು ವಿಪಕ್ಷಗಳು ಹೋರಾಟ ಮಾಡಿದರೆ ಅದಕ್ಕೆ ಅರ್ಥವಿರುತ್ತದೆ. ನೋಟಿಸ್ ನೀಡದೆ, ಸದನದ ಬಾವಿಗೂ ಬರದೇ ರಾಜಿನಾಮೆ ಕೊಡಿ ಎಂದರೆ ಅರ್ಥವಿದೆಯೇ ಎಂದು ಸಿಎಂ ಡಿಕೆ ಶಿವಕುಮಾರ್ ಪ್ರತಿಪಕ್ಷಗಳ ನಡೆಗೆ ಚಾಟಿ ಬೀಸಿದರು.
ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಸಿಎಂ ಪ್ರತಿಪಕ್ಷಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಪಕ್ಷದವರೂ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು. ಅವರುಗಳು ಯಾರೂ ಸರಿಯಾಗಿ ಚರ್ಚೆ ಮಾಡದೇ ಮುಂದುವರೆಯುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳ ಹೋರಾಟಕ್ಕೆ ನಮ್ಮ ತಕರಾರಿಲ್ಲ. ನಾನು ಈ ಹಿಂದೆ ಪಕ್ಷದ ಅಧ್ಯಕ್ಷನಾಗಿದ್ದಾಗ ಸಚಿವ ನಾಗೇಂದ್ರ ಅವರ ಬಳಿ ತೆರಳಿ ತನಿಖೆಯಾಗಲಿ ಎಂದು ರಾಜಿನಾಮೆ ಪಡೆದಿದ್ದೆ. ಆನಂತರ ಸರ್ಕಾರ ತನಿಖೆ ನಡೆಸಿದೆ. ಈಗ ಮತ್ತೆ ರಾಜಿನಾಮೆ ಕೇಳುತ್ತಿದ್ದಾರೆ. ರಾಜಿನಾಮೆ ಕೇಳುವುದಕ್ಕೂ ಒಂದು ಮಾರ್ಗವಿದೆ. ವಿಪಕ್ಷಗಳು ಚರ್ಚೆ ನಡೆಸಲು ನೋಟಿಸ್ ನೀಡಿ ಅದರಂತೆ ನಡೆಯಲಿ ಎಂದು ಆಗ್ರಹಿಸಿದರು.
ನಾಗೇಂದ್ರ ಅವರು ಏತಕ್ಕೆ ರಾಜಿನಾಮೆ ನೀಡಬೇಕು? ವಿಪಕ್ಷಗಳು ಏನೇನು ಕಂಡು ಹಿಡಿದರು. ಅವರ ಬಳಿ ಏನೇನು ಮಾಹಿತಿಯಿದೆ? ಸಿಬಿಐ, ಇಡಿ, ಎಸ್ ಐಟಿ ಅವರು ಏನು ಮಾಹಿತಿ ಕೊಟ್ಟರು ಎಂಬುದನ್ನು ಸದನದ ಮೂಲಕ ಜನರಿಗೆ ತಿಳಿಸಲಿ. ಯಾವುದೇ ನೋಟಿಸ್ ನೀಡದೇ ಈ ರೀತಿಯ ಘಟನೆ ನಡೆಯುತ್ತಿರುವುದು ಇದೇ ಮೊದಲು. ನೋಟಿಸ್ ನೀಡಿದರೆ ಚರ್ಚೆ ಮಾಡಬಹುದು. ಇಡೀ ದಿನ ಬೇರೆ ವಿಚಾರಗಳನ್ನು ತೆಗೆದುಕೊಳ್ಳದೇ ಇದನ್ನೇ ಚರ್ಚೆ ಮಾಡಬಹುದು ಎಂದರು.
ವಿಪಕ್ಷಗಳು ಅವಕಾಶ ನೀಡಿದರೆ ಏಕೆ ನಾಗೇಂದ್ರ ಅವರನ್ನು ನಾನು ಸಂಪುಟಕ್ಕೆ ಸೇರಿಸಿಕೊಂಡೆ ಎಂದು ಖಂಡಿತವಾಗಿ ತಿಳಿಸುತ್ತೇನೆ. ಅದಕ್ಕೂ ವಿಪಕ್ಷಗಳು ಸಮಾಧಾನವಾಗದೇ ಇದ್ದರೆ ಪ್ರತಿಭಟನೆ ಮುಂದುವರೆಸಲಿ. ಚರ್ಚೆಯನ್ನೇ ನಡೆಸದೇ ನಾಗೇಂದ್ರ ಭ್ರಷ್ಟರು, ರಾಹುಲ್ ಗಾಂಧಿ ಮನೆಗೆ ಹಣ ಹೋಯಿತು. ಡಿ ಕೆ ಶಿವಕುಮಾರ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ಹೇಳುವುದು ಸಮಂಜಸವೇ ಎಂದು ಕಿಡಿಕಾರಿದರು.
ದಯವಿಟ್ಟು ನೋಟಿಸ್ ಕೊಡಿ. ಎರಡು ದಿನ ಇದನ್ನೇ ಚರ್ಚೆ ಮಾಡೋಣ. ವಿಪಕ್ಷಗಳ ಎಲ್ಲಾ ಪ್ರಶ್ನೆ, ಅನುಮನ, ಗೊಂದಲಗಳಿಗೆ ಉತ್ತರ ನೀಡುತ್ತೇನೆ. ಯಾವ ಕೇಂದ್ರ ಸಚಿವರು, ರಾಜ್ಯದ ಸಚಿವರುಗಳ ಮೇಲೆ ಏನೇನು ಪ್ರಕರಣಗಳು ನಡೆದವು, ಹೇಗೆ ತನಿಖೆ ನಡೆಯಿತು ಎಂದು ಅವರುಗಳ ಹೆಸರು ಹೇಳಿದರೆ ನಿಮಗೆ ಬೇಸರವಾಗುತ್ತದೆ ಎಂದು ಸಿಎಂ ಬಿಜೆಪಿ ಸದಸ್ಯರ ಕಾಲೆಳೆದರು.


