ವಿಜಯಪುರದ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯೊಂದರ ತೆರೆದ ಬಾವಿಗೆ ಬಿದ್ದು ಬಾಲಕಿಯರಿಬ್ಬರು ಮೃತಪಟ್ಟಿದ್ದಾರೆ. ಬಾಲಕಿಯರ ರಕ್ಷಣೆಗೆಂದು ಬಾವಿಗಿಳಿದ ತಂದೆಯೂ ನಾಪತ್ತೆಯಾಗಿರುವ ಘಟನೆ ನಡೆದಿದೆ.
೧೫ ವರ್ಷದ ಸಾಕ್ಷಿ ಮತ್ತು ೧೦ ವರ್ಷದ ರಕ್ಷಿತಾ ಬಾವಿಗೆ ಬಿದ್ದ ಬಾಲಕಿಯರು. ಅವರನ್ನು ರಕ್ಷಿಸಲು ತಂದೆ ೪೦ ವರ್ಷದ ಸಾಬನ್ಣ ಬಾವಿಗೆ ಜಿಗಿದಿದ್ದು ನಾಪತ್ತೆಯಾಗಿದ್ದಾರೆ. ಸಾಬಣ್ಣ ಅವರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.
ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಸಾಬಣ್ಣ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ನಿಡಗುಂದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ
ಹಾಸನದ ಚನ್ನರಾಯಪಟ್ಟಣ ಅಂಬಿಕಾ ನಗರದಲ್ಲಿ ಯುವತಿಯ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾಕಮ್ಮ-ಮಂಜಶೆಟ್ಟಿ ದಂಪತಿ ಪುತ್ರಿ ರಚಿತಾ (19) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಯುವತಿ. ರಚಿತಾ ಮೊದಲ ವರ್ಷದ ಬಿಎ ಓದುತ್ತಿದ್ದಳು. ಒಂದುವರೆ ವರ್ಷದಿಂದ ನವೀನ್ ಎಂಬಾತನನ್ನು ಪ್ರೀತಿಸುತ್ತಿದ್ದಳು.
ನವೀನ್ ಪಟ್ಟಣದ ರೇಣುಕಾಂಬ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದೇ ಬೇಕರಿಯಲ್ಲಿ ರಚಿತಾ ತಾಯಿ ಸಾಕಮ್ಮ ಕೆಲಸ ಮಾಡುತ್ತಿದ್ದರು. ಇಬ್ಬರು ಪ್ರೀತಿಸುವ ವಿಷಯವನ್ನು ಸಾಕಮ್ಮ ಬಳಿ ರಚಿತಾ ಹಾಗೂ ನವೀನ್ ಹೇಳಿದ್ದರು. ಮದುವೆ ಮಾಡಿಸುವುದಾಗಿ ರಚಿತಾ ತಾಯಿ ಭರವಸೆ ಕೊಟ್ಟಿದ್ದರು. ಆದರೆ ಇತ್ತೀಚೆಗೆ ರಚಿತಾಳಿಗೆ ನವೀನ್ ಕಿರುಕುಳ ನೀಡುತ್ತಿದ್ದ ಎಂದು ಸಾಕಮ್ಮ ಆರೋಪಿಸಿದ್ದಾರೆ. ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


