ಬಿಡದಿಯ ದೊಡ್ಡೇರಿ ಬಳಿ ಎಂಎನ್‌ಸಿ ಬ್ಯಾಂಡ್ ಹೆಸರಿನಲ್ಲಿ ನಕಲಿ ಔಷಧಿ ಪೂರೈಕೆ ಘಟಕ ಪತ್ತೆಯಾಗಿದ್ದು, ಆರು ಕೋಟಿ ರೂ. ಬೆಲೆಯ ನಕಲಿ ಔಷಧಿ ವಶಕ್ಕೆ ಪಡೆದಿರುವ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಎಸ್‌ಐಟಿಗೆ ವಹಿಸಲು ಮುಂದಾಗಿದೆ.
ಆರೋಗ್ಯ ಸಚಿವ ಯು.ಟಿ ಖಾದರ್ ಮಾಹಿತಿ ನೀಡಿದ್ದು, ಈ ನಕಲಿ ಔಷಧಿ ಜಾಲ ಯಾವ ಆಸ್ಪತ್ರೆಗಳೊಂದಿಗೆ ಸಂಪರ್ಕ ಹೊಂದಿದೆ, ಇದರಿಂದ ಎಷ್ಟು ಜನರ ಆರೋಗ್ಯಕ್ಕೆ ಧಕ್ಕೆಯಾಗಿದೆ ಎಂಬ ಬಗ್ಗೆ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡೇರಿ ಸಮೀಪದ ಸಿ.ಕೆ. ತಾಂಡ್ಯಾ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ನಕಲಿ ಔಷಧ ತಯಾರಿ ಜಾಲ ಪತ್ತೆಯಾಗಿದೆ. ಪ್ರತಿಷ್ಠಿತ ಕಂಪನಿಗಳ ಹೆಸರನ್ನು ಬಳಸಿಕೊಂಡು ನಕಲಿ ಔಷಧಿಗಳಿಗೆ ಬ್ರ್ಯಾಂಡ್ ರೂಪ ನೀಡಲಾಗುತ್ತಿತ್ತು. ಬಾಟಲ್‌ಗಳಿಗೆ ಲೇಬಲ್ ಅಂಟಿಸಿ, ಕ್ಯಾಪ್ ಹಾಕಿ ಮಾರುಕಟ್ಟೆಗೆ ರವಾನಿಸಲು ಸಿದ್ಧಪಡಿಸಲಾಗುತ್ತಿತ್ತು. ಔಷಧಿಗಳ ನಕಲಿ ತಯಾರಿಕೆ ಜೊತೆಗೆ ಪ್ಯಾಕಿಂಗ್ ಮತ್ತು ಲೇಬಲಿಂಗ್‌ನ ಸಂಪೂರ್ಣ ವ್ಯವಸ್ಥೆ ಘಟಕದಲ್ಲೇ ಇತ್ತು. ಅವಧಿ ಮೀರಿದ ಉತ್ಪನ್ನಗಳ ಜೊತೆಗೆ ಇಂಜೆಕ್ಷನ್‌ಗಳನ್ನೇ ನಕಲಿ ಮಾಡಿರುವುದು ಪತ್ತೆಯಾಗಿದೆ. ಇವು ಈಗಾಗಲೇ ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್‌ಗಳಿಗೆ ತಲುಪಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿದೆ.
ನಕಲಿ ಔಷಧಿಗಳ ಮೂಲ, ಯಾರಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಫಾರ್ಮ್ ಹೌಸ್ ಸಿದ್ದಯ್ಯ ಎಂಬವರಿಗೆ ಸೇರಿದ್ದು, ದುಬೈನಲ್ಲಿರುವ ಪ್ರಶಾಂತ್ ಎಂಬುವರಿಗೆ ಲೀಸ್ಗೆ ನೀಡಲಾಗಿತ್ತು. ಪ್ರಶಾಂತ್ ನಕಲಿ ಬ್ರಾಂಡ್ ಔಷಧ ಘಟಕ ನಡೆಸುತ್ತಿದ್ದ. ಪ್ರಭುದೇವ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. . ಐಸಿಯುನಲ್ಲಿ ಬಳಸುವ ಔಷಧಿ ಕೂಡ ಇಲ್ಲಿ ನಕಲಿ ತಯಾರಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ದುಬಾರಿ ಔಷಧಗಳನ್ನು ನಕಲಿ ಮಡಿ ಮಾರಾಟ ಮಾಡಲಾಗುತ್ತಿದೆ. ಪೊಲೀಸರು ಹಾಗೂ ಔಷಧ ಆಡಳಿತ ವಿಭಾಗದ ಅಧಿಕಾರಿಗಳು ಜಾಲವನ್ನು ಭೇದಿಸಿ ಆರು ಕೋಟಿ ರೂ. ಬೆಲೆಯ ನಕಲಿ ಔಷಧಗಳನ್ನು ವಶಕ್ಕೆ ಪಡೆದಿದ್ದಾರೆ. ಚೇತನ್ ಎಂಬಾತ ದಂಧೆಯ ಪ್ರಮುಖ ಆರೋಪಿ ಎನ್ನಲಾಗಿದೆ.
ಹೋಟೆಲ್, ರೆಸ್ಟೋರೆಂಟ್, ಮೆಡಿಕಲ್ ಸ್ಟೋರ್ ಹಾಗೂ ಆಸ್ಪತ್ರೆಗಳಲ್ಲಿ ಕಂಡುಬರುವ ಸಮಸ್ಯೆಗಳ ಕುರಿತು ಸಾರ್ವಜನಿಕರು ದೂರು ನೀಡಲು ಆರೋಗ್ಯ ಇಲಾಖೆ ಆರಂಭಿಸಿರುವ QR ಕೋಡ್ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಚಿವ ಖಾದರ್ QR ಕೋಡ್ ವ್ಯವಸ್ಥೆ ಬಿಡುಗಡೆ ಮಾಡಿದ್ದಾರೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಮೆಡಿಕಲ್ ಶಾಪ್‌ಗಳು ಹಾಗೂ ಆಸ್ಪತ್ರೆಗಳ ಮುಂಭಾಗ QR ಕೋಡ್ ಅಳವಡಿಸಲಾಗಿದ್ದು, ಸಾರ್ವಜನಿಕರು ಸ್ಕ್ಯಾನ್ ಮಾಡಿ ದೂರುಗಳನ್ನು ದಾಖಲಿಸಬಹುದಾಗಿದೆ.


