Menu

ಸಂತ್‌ನಲ್ಲಿ ಚರ್ಚೆಯಿಲ್ಲದೆ ಮಸೂದೆಗಳಿಗೆ ಅಸ್ತು

ಸಂಸತ್ ಸುಗಮ ಕಲಾಪಕ್ಕೆ ವಿಪಕ್ಷಗಳ ಅಡ್ಡಿ ಎಂಬುದು ಸರ್ಕಾರದ ಆರೋಪ, ಚರ್ಚೆಗೆ ಸರ್ಕಾರ ನಿರಾಕರಣೆ ಎಂಬುದು ವಿಪಕ್ಷಗಳ ಮತ್ತೊಂದು ಆರೋಪ . ಈ ಎರಡೂ ವಾದಗಳು ಹಾರ್‍ಮೋನೀಯಸ್ ರೂಪ ತಾಳಿದಾಗಲೇ ಸಂಸದೀಯ ಪ್ರಜಾತಂತ್ರಕ್ಕೆ ಸರಿಯಾದ ಅರ್ಥ. ಸಂಸತ್ತಿನೊಳಗೆ ಇಂತಹ ಸೌಹಾರ್ದ ಸನ್ನಿವೇಶವನ್ನು ನಿರ್ಮಿಸುವ ಅವಕಾಶ ಸ್ಪೀಕರಿಗೆ ಮಾತ್ರ .

ಮೊನ್ನೆಯಷ್ಟೆ ಮುಗಿದ ಸಂಸತ್ ಅಧಿವೇಶನದಲ್ಲಿ ಚರ್ಚೆ ಇಲ್ಲದೆ ಹದಿಮೂರು ವಿಧೇಯಕಗಳು ಅಂಗೀಕಾರಗೊಂಡಿವೆ ! ಇದು ಸಂಸದೀಯ ಹಾಗೂ ಪ್ರಜಾತಂತ್ರದ ಮೂಲ ಆಶಯಗಳಿಗೆ ವಿರುದ್ದ . ಇದರಲ್ಲಿ ಎರಡು ಮಾತಿಲ್ಲ. ಈ ದೇಶದ ಜನತೆಗೆ ಅಗತ್ಯವಿರುವ ಶಾಸನಗಳ ಸಾಧಕ ಬಾಧಕ ಕುರಿತು ಸಂಸದರು ಸಂಸತ್ತಿನಲ್ಲಿ ಚರ್ಚೆ ನಡೆಸುವುದಿಲ್ಲ ಎಂದರೆ ಹೇಗೆ ? ಇಂತಹ ಸಮಯದಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವ ವಿಧೇಯಕಗಳಿಗೆ ಯಾವ ತರಹೆಯ ವಾಸ್ತವಿಕ ಪ್ರಯೋಜನ ಉಂಟು ? ಆಡಳಿತಾರೂಢ ಪಕ್ಷಕ್ಕೆ ಸದನದಲ್ಲಿ ಸದಸ್ಯರ ಮೆಜಾರಿಟಿ ಇದೆ ಎಂದ ಮಾತ್ರಕ್ಕೆ ವಿಧೇಯಕಗಳನ್ನು ಚರ್ಚೆ ಇಲ್ಲದೆ ಅವುಗಳ ಒಪ್ಪಿಗೆ ಪಡೆಯುವುದೆಂಬುದೇ ಅರ್ಥಹೀನ.

ಇಪ್ಪತ್ತೆಂಟು ದಿನಗಳ ಸಂಸತ್ ಬಹುತೇಕ ಕಲಾಪವು ಗದ್ದಲ, ಕೋಲಾಹಲ ಮತ್ತು ವಾಕ್ಸಮರಗಳ ನಡುವೆ ಮುಕ್ತಾಯಗೊಂಡಿದೆ. ಪ್ರಧಾನಿ ಮತ್ತು ದೇಶದ ಗೃಹಮಂತ್ರಿ ಈ ಭಾರಿಯ ಸಂಸತ್ ಕಲಾಪದಲ್ಲಿ ನೇರವಾಗಿ ಭಾಗವಹಿಸಿದ ಅವಧಿಯೂ ಕಡಿಮೆ. ಸಂಸದೀಯ ಪ್ರಜಾತಂತ್ರದಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳ ಭಾಗವಹಿಸುವಿಕೆ ಅತಿಮುಖ್ಯ. ಅಧಿವೇಶನದ ಕಲಾಪ ಆರಂಭವಾಗುವ ಮುನ್ನವೇ ಬಿಸಿನೆಸ್ ಅಡ್ವೈಸರಿ ಕಮಿಟಿ ( ಬಿಎಸಿ) ಸಭಾಧ್ಯಕ್ಷರ ಕೊಠಡಿಯಲ್ಲಿ ಸಮಾವೇಶಗೊಂಡು ಸಂಸತ್ತಿನಲ್ಲಿ ಪ್ರಸ್ತಾಪವಾಗುವ ಮತ್ತು ಚರ್ಚೆಗೆ ಬರುವ ವಿಷಯಗಳ ಕಾರ್ಯಸೂಚಿಯನ್ನು ಅಜೆಂಡಾ) ಸಿದ್ದಪಡಿಸಬೇಕಿರುವುದು ಸಂಪ್ರದಾಯ. ಆದರೆ ಇಂದು ಸಂಸತ್ತಿನಲ್ಲಿರುವ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಮನೋಧೋರಣೆಯನ್ನು ಕಂಡಾಗ, ಸರ್ಕಾರಕ್ಕೆ ಆಗಲಿ, ವಿರೋಧ ಪಕ್ಷಗಳಿಗೆ ಆಗಲಿ, ಸಂಸದೀಯ ಸತ್ ಸಂಪ್ರದಾಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕೆಂಬುದು ಇಲ್ಲವೆ ಇಲ್ಲವೆಂಬ ಸಂಗತಿ ಮೇಲ್ನೋಟ್ಕಕ್ಕೆ ಎದ್ದು ಕಾಣುತ್ತದೆ.

ವಿರೋಧ ಪಕ್ಷಗಳ ಬೇಡಿಕೆಗೆ ಸರ್ಕಾರ ಮಣಿಯಬಾರದು ಎಂಬ ಸಾಂವಿಧಾನಿಕ ನೀತಿಯೇನೂ ಇಲ್ಲ. ಆಡಳಿತ ನಡೆಸುವ ಪ್ರಕ್ರಿಯೆ ಸಮಯದಲ್ಲಿ ಸರ್ಕಾರದಿಂದ ಆಗುವಂತಹ ತಪ್ಪು ಅಥವಾ ದೋಷಗಳನ್ನು ಸರಿಪಡಿಸಿಕೊಳ್ಳಬೇಕಾದರೆ ಸರ್ಕಾರವು ವಿಪಕ್ಷಗಳ ಟೀಕೆ ಮತ್ತು ಟಿಪ್ಪಣಿಗಳಿಗೆ ಮಣಿಯಲೇಬೇಕಲ್ಲವೇ ? ಇದುವೇ ಅಲ್ಲವೇ ಪ್ರಜಾತಂತ್ರ ? ಈ ದಿಶೆಯಲ್ಲಿ ಇತ್ತೀಚಿನ ಸಂಸತ್ ಕಲಾಪಗಳ ದಿಕ್ಕು ಮತ್ತು ದಿಶೆಯನ್ನು ಕಂಡಾಗ ನಮಗಿಂದು ಎಲ್ಲಿಯೋ ಪಿ ಎ ಸಂಗ್ಮಾ, ಸೋಮನಾಥ್ ಚಟರ್ಜಿ ಅಂತಹ ಖಡಕ್ ಲೋಕಸಭೆ ಸ್ವೀಕರುಗಳ ಕೊರತೆ ಎದ್ದು ಕಾಣುವಂತಾಗಿದೆ. ಸಂಸತ್ ಸುಗಮ ಕಲಾಪಗಳಿಗೂ ಮತ್ತು ಇದನ್ನು ನಡೆಸುವ ಹೊಣೆ ಹೊತ್ತ ಪೀಠಾಸೀನ ಅಧಿಕಾರಿಗಳಿಗೂ ನಿಕಟ ಸಂಬಂಧವಿದೆ.

ಸಂಸತ್ ಕಲಾಪಕ್ಕೆ ವಿಪಕ್ಷಗಳ ಅಡ್ಡಿ ಎಂಬುದು ಸರ್ಕಾರದ ಆರೋಪ, ಚರ್ಚೆಗೆ ಸರ್ಕಾರ ನಿರಾಕರಣೆ ಎಂಬುದು ವಿಪಕ್ಷಗಳ ಮತ್ತೊಂದು ಆರೋಪ . ಈ ಎರಡೂ ವಾದಗಳು ಹಾರ್‍ಮೋನೀಯಸ್ ರೂಪ ತಾಳಿದಾಗಲೇ ಸಂಸದೀಯ ಪ್ರಜಾತಂತ್ರಕ್ಕೆ ಸರಿಯಾದ ಅರ್ಥ. ಸಂಸತ್ತಿನೊಳಗೆ ಇಂತಹ ಸೌಹಾರ್ದ ಸನ್ನಿವೇಶವನ್ನು ನಿರ್ಮಿಸುವ ಅವಕಾಶ ಸ್ಪೀಕರಿಗೆ ಮಾತ್ರ ಸಾಧ್ಯ. ಒಟ್ಟಿನಲ್ಲಿ ಸಂಸದೀಯ ಕಲಾಪಗಳು ಪ್ರಜಾತಂತ್ರದಲ್ಲಿ ನಂಬಿಕೆ ಇಟ್ಟಿರುವ ಜನತೆಯ ವಿಶ್ವಾಸವನ್ನು ಕಳೆದುಕೊಳ್ಳುವಂತಹ ಮಟ್ಟವನ್ನು ತಲುಪಬಾರದು

Related Posts

Leave a Reply

Your email address will not be published. Required fields are marked *