Menu

ಬರ ಘೋಷಿಸದೆ ರೈತರಿಗೆ ಪರಿಹಾರವಿಲ್ಲದೆ ಸದನದಲ್ಲಿ ಹೇಳಿಕೆಗೆ ಸೀಮಿತಗೊಂಡ ಸರ್ಕಾರ: ಆರ್‌ ಅಶೋಕ

ಬರಗಾಲ ನಿರ್ವಹಣೆಗೆ ಅನುದಾನ ನೀಡದೆ, ರೈತರಿಗೆ ಪರಿಹಾರ ನೀಡದೆ ಸದನದಲ್ಲಿ ಹೇಳಿಕೆ ನೀಡಲು ಸರ್ಕಾರ ಮುಂದಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಭೀಕರ ಬರಗಾಲದ ಬಗ್ಗೆ ಬಿಜೆಪಿಯಿಂದ ಅಧ್ಯಯನ ಮಾಡಿ ವರದಿ ನೀಡಲಾಗಿದೆ. ನಾನು ಕೂಡ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಅಧ್ಯಯನ ಮಾಡಿದ್ದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಸರಿಯಾದ ವಾದ ಮಂಡಿಸದೆ ನೀರಿನ ಕೊರತೆ ಉಂಟಾಗಿದೆ. ಇದರಿಂದಾಗಿ ಮೈಸೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಬರಗಾಲ ಹೆಚ್ಚಿದೆ. ಆದರೂ ರಾಜ್ಯ ಸರ್ಕಾರ ನಯಾಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ಬರಗಾಲವನ್ನು ಘೋಷಣೆ ಕೂಡ ಮಾಡಿಲ್ಲ. ಸಚಿವ ಡಾ.ಜಿ.ಪರಮೇಶ್ವರ್‌ ಈ ಬಗ್ಗೆ ಹೇಳಿಕೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಪರಿಹಾರ ಬಿಡುಗಡೆ ಮಾಡಿ, ಗೋಶಾಲೆ ಕಟ್ಟಿದ್ದರೆ ಅದಕ್ಕಾಗಿ ಹೇಳಿಕೆ ನೀಡಬಹುದು. ಏನೂ ಮಾಡದೆಯೇ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಈ ಬಗ್ಗೆ ಜೆಡಿಎಸ್‌ ಜೊತೆಗೂಡಿ ಸದನದಲ್ಲಿ ಚರ್ಚೆ ಮಾಡಲಾಗುವುದು. ನಿಲುವಳಿ ಸೂಚನೆಗೆ ಮನವಿ ಕೂಡ ನೀಡಲಾಗಿದೆ. ಆದರೆ ಈ ಸಮಯದಲ್ಲಿ ಕಳಂಕಿತ ಸಚಿವ ಬಿ.ನಾಗೇಂದ್ರ ಇರುವಾಗ ಚರ್ಚೆ ನಡೆಯುವುದು ಕಷ್ಟ. ಮೂರು ಸಿಬಿಐ ಹಾಗೂ ಒಂದು ಇಡಿ ಪ್ರಕರಣ ಅವರ ವಿರುದ್ಧವಿದ್ದರೂ ಅವರನ್ನು ಕೈ ಬಿಡುತ್ತಿಲ್ಲ. ಈ ವಿಚಾರವನ್ನು ಮೊದಲಿಗೆ ತೆಗೆದುಕೊಂಡು ನಂತರ ಬರಗಾಲ ವಿಷಯ ಚರ್ಚೆ ಮಾಡುತ್ತೇವೆ. ನಾಗೇಂದ್ರ ಅವರನ್ನು ವಜಾ ಮಾಡುವವರೆಗೂ ನಾವು ಸದನದಲ್ಲಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.

ಕೆಪಿಎಸ್‌ಸಿ ಹಗರಣದ ಬಗ್ಗೆ ಈ ಹಿಂದೆ ಸದನದಲ್ಲಿ ಎರಡು ದಿನ ಚರ್ಚೆ ಮಾಡಲಾಗಿತ್ತು. ಉತ್ತರ ಪ್ರದೇಶದಲ್ಲಿ ಎಂಟು ಸದಸ್ಯರಿದ್ದರೆ, ನಮ್ಮಲ್ಲಿ ಸುಮಾರು 18 ಸದಸ್ಯರಿದ್ದಾರೆ. ಸರ್ಕಾರದಿಂದ ಚೀಟಿ ಕಳುಹಿಸಿದವರನ್ನು ನೇಮಕ ಮಾಡಲಾಗುತ್ತದೆ. ಪಶುವೈದ್ಯ, ಪೊಲೀಸ್‌ ಇಲಾಖೆ ಮೊದಲಾದ ಪರೀಕ್ಷೆಗಳಲ್ಲಿ ದೊಡ್ಡ ಅಕ್ರಮ ನಡೆದಿದೆ. ಅಧ್ಯಕ್ಷರು ಹಾಗೂ ಅವರ ತಂಡ ನೂರಾರು ಕೋಟಿ ರೂ. ಲೂಟಿ ಮಾಡಿದೆ. ಇಡಿ ದಾಳಿಯಿಂದ ತಪ್ಪಿತಸ್ಥರ ಪತ್ತೆಯಾಗಲಿದೆ. ಕಾಂಗ್ರೆಸ್‌ ಸರ್ಕಾರ ಯಾರದ್ದೋ ಮುಲಾಜಿನಲ್ಲಿ ಇದ್ದಂತೆ ಕಾಣುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸದಸ್ಯರ ಸಂಖ್ಯೆ ಕಡಿಮೆ ಮಾಡುತ್ತೇನೆಂದರೂ ಅದು ಜಾರಿಯಾಗಲೇ ಇಲ್ಲ. ಎಸ್‌ಐಟಿ ತನಿಖೆ ಮಾಡಿ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ. ಇದನ್ನು ಸಿಬಿಐ ತನಿಖೆ ಮಾಡಿದ್ದರೆ ನಿಜಾಂಶ ಪತ್ತೆಯಾಗುತ್ತಿತ್ತು. ಖಜಾನೆಗೆ ಹಣವನ್ನು ಮರಳಿ ತರುವ ಕೆಲಸವನ್ನು ಇಡಿ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.

ಬೆಂಗಳೂರಿನಲ್ಲಿರುವ ಸಮಸ್ಯೆಗಳನ್ನು ಮೊದಲು ನಿವಾರಿಸಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ನಂತರ ಬೇಕಿದ್ದರೆ ಬೇರೆ ದೇಶದ ಜನರಿಗೆ ಇಲ್ಲಿ ಅನುಕೂಲ ಕಲ್ಪಿಸಬಹುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸದನದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅನೇಕ ಸವಾಲುಗಳಿವೆ. ಗುಂಡಿ ಇರುವ ರಸ್ತೆಗಳು, ಕಸ ತುಂಬಿದ ರಸ್ತೆಗಳು ಮೊದಲಾದ ಸಮಸ್ಯೆಗಳಿವೆ. ಸಚಿವ ಕೃಷ್ಣ ಭೈರೇಗೌಡರು ರಸ್ತೆ ಬದಿ ನಿಲ್ಲಿಸಿದ ಹಳೆ ಕಾರುಗಳನ್ನು ತೆಗೆಸುತ್ತೇವೆ ಎಂದಿದ್ದರು. ಈಗ ಲಕ್ಷಾಂತರ ಕಾರುಗಳು ಅಲ್ಲೇ ಇವೆ. ಪಾದಚಾರಿ ಮಾರ್ಗದ ಒತ್ತುವರಿ ತೆರವು ಮಾಡುತ್ತೇನೆ ಎಂದಿದ್ದರು. ಈಗ ನೋಡಿದರೆ ಮತ್ತೆ ಒತ್ತುವರಿ ನಡೆದಿದೆ.  ಸ್ವಚ್ಛ ಬೆಂಗಳೂರು ಎಂಬ ಅಭಿಯಾನ ನಡೆಯುತ್ತಿದೆ. ಕಸ ಇಲ್ಲದ ಒಂದು ರಸ್ತೆಯನ್ನು ತೋರಿಸಿದರೆ  ಸರ್ಕಾರಕ್ಕೆ ಪ್ರಶಸ್ತಿ ಕೊಡುತ್ತೇನೆ. ಬೆಂಗಳೂರನ್ನು ಸುಂದರ ಮಾಡುತ್ತೇವೆ ಎಂದರೆ, ಮೊದಲು ಇಲ್ಲಿನ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕು. ಹೊರಗಿನ ಜನರಿಗೆ ಅನುಕೂಲ ಕಲ್ಪಿಸುವುದು ಬೇರೆ ಮಾತು. ಇಂತಹ ಕಾರ್ಯಗಳನ್ನು ಸರ್ಕಾರ ಮಾಡಿದರೆ ನಾನು ಕೂಡ ಬೆಂಬಲಿಸುತ್ತೇನೆ ಎಂದರು.

ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಮಂಕಾಳ ವೈದ್ಯರಿಗೆ ಅಭಿನಂದನೆ ಸಲ್ಲಿಸಿದ ಮಾತನಾಡಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ, ಮಂಕಾಳ ವೈದ್ಯರು ಉಪಸಭಾಧ್ಯಕ್ಷರಾಗಿರುವುದಕ್ಕೆ ನಾವು ಸಹಕಾರ ನೀಡಿದ್ದೇವೆ. ಅವರ ಹೆಸರು ಮೊದಲಿಗೆ ಸಚಿವರ ಪಟ್ಟಿಯಲ್ಲಿತ್ತು. ಅವರಿಗೆ ಸರಿಯಾಗಿ ಮೀನು ಸಿಗದೆ ದೋಣಿ ಮುಳುಗಿದೆ. ಆದ್ದರಿಂದ ಅವರು ಉಪಸಭಾಧ್ಯಕ್ಷರಾಗಿದ್ದಾರೆ. ಸಭಾಧ್ಯಕ್ಷರು ಆಗಾಗ ತಮ್ಮ ಅವಕಾಶವನ್ನು ಉಪಸಭಾಧ್ಯಕ್ಷರಿಗೆ ನೀಡಿ ತರಬೇತಿ ಕೊಡಬೇಕು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಎಲ್ಲರನ್ನೂ ಬೆಳೆಸುತ್ತಿದ್ದರು. ಅದೇ ರೀತಿ ಮಂಕಾಳ ವೈದ್ಯರಿಗೂ ತರಬೇತಿ ಕೊಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಡಿಕೆಶಿವಕುಮಾರ್‌ ಎಲ್ಲರಿಗೂ ತುಪ್ಪ ಸವರುತ್ತಿದ್ದಾರೆ. ಸ್ಪೀಕರ್‌ ಕೂಡ ಮುಂದೆ ಸಿಎಂ ಆಗುತ್ತಾರೆ ಎನ್ನುತ್ತಿದ್ದಾರೆ. ಕೊನೆಗೆ ಅವರ ಕೆಲಸವನ್ನು ಮಾಡಿಕೊಳ್ಳುತ್ತಾರೆ. ಆ ಚಾಕಚಕ್ಯತೆ ಅವರಿಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ರೈಲು ತಪ್ಪಿಸಿಕೊಂಡು ಅರ್ಧ ದಾರಿಯಲ್ಲಿ ರೈಲು ಹತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಯೋಜನೆಗಳನ್ನು ಜಾರಿ ಮಾಡುವುದು, ಎಲ್ಲ ಶಾಸಕರನ್ನು ಒಂದಾಗಿ ಕರೆದುಕೊಂಡು ಹೋಗುವುದು ಸವಾಲಿನ ಕೆಲಸ ಎಂದರು.

Related Posts

Leave a Reply

Your email address will not be published. Required fields are marked *