ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೆಸಗೋಡು ಗ್ರಾಮದಲ್ಲಿ ಅನೈತಿಕ ಸಂಬಂಧ ಅನುಮಾನದಿಂದ ವ್ಯಕ್ತಿಯು ಪತ್ನಿಯನ್ನು ಹತ್ಯೆ ಮಾಡಿ ಸಂಬಂಧಿಕರಿಗೆ ವೀಡಿಯೊ ಕಾಲ್ ಮಾಡಿ ತಿಳಿಸಿದ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆಯ ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ. ಹಳೇಬೀಡು ಹೋಬಳಿಯ ಸಾಣೇನಹಳ್ಳಿ ಗ್ರಾಮದ ನಿವಾಸಿ ಗಗನ (38) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು, ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಕೆಸಗೋಡು ಗ್ರಾಮದ ರಘು (41) ಆತ್ಮಹತ್ಯೆ ಮಾಡಿಕೊಂಡವ.
13 ವರ್ಷಗಳ ಹಿಂದೆ ಗಗನ ಮತ್ತು ರಘು ಮದುವೆಯಾಗಿದ್ದು, ದಂಪತಿಗೆ 12 ವರ್ಷದ ಹಾಗೂ ಆರು ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ. ಕುಟುಂಬವು ಚಿಕ್ಕಮಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದು, ಅಲ್ಲಿಯೇ ವಾಸವಾಗಿತ್ತು.
ಶುಕ್ರವಾರ ಸಂಜೆ ರಘು ಪತ್ನಿಯೊಂದಿಗೆ ಕಾರಿನಲ್ಲಿ ಕೆಸಗೋಡು ಗ್ರಾಮದತ್ತ ತೆರಳಿದ್ದಾನೆ. ಸಂಜೆ 6.30ಕ್ಕೆ ಸಂಬಂಧಿಕರಿಗೆ ವೀಡಿಯೊ ಕಾಲ್ ಮಾಡಿ, ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ಹೇಳಿದ್ದ. ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿ ಪತಿ ಕಾರಿನಲ್ಲೇ ಗಗನಳನ್ನು ಹತ್ಯೆ ಮಾಡಿ ಯಗಚಿ ನಾಲೆ ಸಮೀಪ ಶವವನ್ನು ಎಸೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಯಗಚಿ ನಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬಳಿಕ ರಘು ಕೆಸಗೋಡು ಗ್ರಾಮಕ್ಕೆ ಬಂದು, ರಸ್ತೆ ಬದಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಅರೇಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.


