Menu

ಪೂಜೆ ಮಾಡುವ ಬಾಬಾ ಎಂದು ಸಂಪರ್ಕಿಸಿ ಮಹಿಳೆಗೆ 2.5 ಕೋಟಿ ರೂ. ವಂಚನೆ

ಬೆಂಗಳೂರಿನ ಚಾಮರಾಜಪೇಟೆಯ ನಿವಾಸಿ ಮಹಿಳೆಗೆ ಬಾಬಾ ಎಂದು ಪರಿಚಯಿಸಿಕೊಂಡ ವ್ಯಕ್ತಿ ಮತ್ತು ಇತರ ಇಬ್ಬರು ಸೇರಿ 2.5 ಕೋಟಿ ರೂ. ವಂಚಿಸಿರುವ ಆರೋಪವಿದ್ದು, ಆರೋಪಿಗಳ ವಿರುದ್ಧ ಕೇಸ್‌ ದಾಖಲಾಗಿದೆ.

ದುಷ್ಟಶಕ್ತಿ ನಿವಾರಣೆ ಮತ್ತು ಪೂಜೆ ಮಾಡುವುದಾಗಿ ನಂಬಿಸಿ ಚಾಮರಾಜಪೇಟೆ ನಿವಾಸಿಯಾಗಿದ್ದ ಆಂಧ್ರ ಪ್ರದೇಶದ ಮಹಿಳೆಯಿಂದ 2.5 ಕೋಟಿ ರೂ. ಪಡೆದು ವಂಚಿಸಿರುವ ಪ್ರಕರಣದಲ್ಲಿ ಮೂವರ ವಿರುದ್ಧ ಸಿಸಿಬಿ ತನಿಖೆ ಕೈಗೊಂಡಿದೆ.

ದೂರುದಾರ ಮಹಿಳೆ ಕುಮುದಾ ಅವರ ಮಗ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ. ಕುಮುದಾ ಅವರ ಮನೆಗೆ ದುಷ್ಟಶಕ್ತಿಗಳು ಪ್ರವೇಶಿಸಿದ್ದರಿಂದಲೇ ಮಗನಿಗೆ ಅನಾಹುತವಾಗಿದೆ ಎಂದು ಆರೋಪಿಗಳು ನಂಬಿಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಯ ಮೇಲೆ ಸಾಲ ಪಡೆಯುವ ವಿಚಾರದಲ್ಲಿ ಪರಿಚಯವಾಗಿದ್ದ ಮಧ್ಯವರ್ತಿಗಳ ಮೂಲಕ ಕುಮುದಾ ಅವರಿಗೆ ಅಪ್ಸರ್ ಪಾಷಾ ಎಂಬಾತನನ್ನು ಬಾಬಾ ಎಂದು ಪರಿಚಯಿಸಲಾಗಿತ್ತು. ಬಳಿಕ ಮನೆಯಲ್ಲಿ ವಿಶೇಷ ಪೂಜೆ ನಡೆಸುವ ನೆಪದಲ್ಲಿ ಆರಂಭದಲ್ಲಿ 8 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ.

ಆರೋಪಿಗಳು ಮತ್ತಷ್ಟು ಹಣ ನೀಡುವಂತೆ ಕುಮುದಾ ಅವರನ್ನು ನಂಬಿಸಿದ್ದಾರೆ ಎನ್ನಲಾಗಿದೆ. ರಿಸರ್ವ್ ಬ್ಯಾಂಕ್‌ನಿಂದ 500 ಕೋಟಿ ರೂ. ಬರಲಿದೆ. ಆ ಹಣ ಪಡೆಯಲು ತಕ್ಷಣ ಹಣದ ಅಗತ್ಯವಿದೆ ಎಂದು ಹೇಳಿ, 2.5 ಕೋಟಿ ರೂ. ಸಾಲವಾಗಿ ನೀಡಿದರೆ ಬಳಿಕ 10 ಕೋಟಿ ರೂ. ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಆರೋಪಿಗಳ ಮಾತನ್ನು ನಂಬಿದ ಕುಮುದಾ, ಚಾಮರಾಜಪೇಟೆಯಲ್ಲಿದ್ದ ಮನೆಯನ್ನು 8.5 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಮನೆ ಮಾರಾಟದಿಂದ ಬಂದ ಹಣದಲ್ಲಿ 2.5 ಕೋಟಿ ರೂ. ಆರೋಪಿಗಳಿಗೆ ನೀಡಿದ್ದು, ಬಳಿಕ ಹಣ ವಾಪಸ್ ಕೇಳಿದಾಗ ವಂಚನೆ ಬೆಳಕಿಗೆ ಬಂದಿದೆ.

ಹಣ ವಾಪಸ್ ನೀಡುವಂತೆ ಕುಮುದಾ ಕೇಳಿದಾಗ ಆರೋಪಿಗಳು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ಎಂದು ಹೇಳಲಾಗಿರುವ ಅಪ್ಸರ್ ಪಾಷಾ ಹಾಗೂ ಮಧ್ಯವರ್ತಿಗಳಾದ ಶಂಕರ್ ಮತ್ತು ಭರತ್ ವಿರುದ್ಧ ಸಿಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *