Menu

ಪಣವಿಟ್ಟು ಆಡುವ ಆನ್‌ಲೈನ್‌ ಗೇಮ್‌ಗಳು, ಬೆಟ್ಟಿಂಗ್‌ ಗೇಮ್‌ಗಳಿಗೆ ಕಾನೂನು ರಕ್ಷಣೆ ಇಲ್ಲ: ಸುಪ್ರೀಂ ತೀರ್ಪು

supreme court

ಹಣ ಅಥವಾ ಪಣ ಒಡ್ಡಿ ಆಡುವ ಆನ್‌ಲೈನ್ ಗೇಮ್‌, ಜೂಜು ಮತ್ತು ಇತರ ಕೌಶಲ್ಯ ಆಟಗಳ ಮೇಲಿನ ಬೆಟ್ಟಿಂಗ್‌ಗೆ ಯಾವುದೇ ಸಾಂವಿಧಾನಿಕ ರಕ್ಷಣೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ನಿಷೇಧಿಸುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳ ಕಾನೂನುಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಈ ಮೂಲಕ ಎತ್ತಿಹಿಡಿದಿದೆ.

ಹೈಕೋರ್ಟ್‌ಗಳ ಈ ಹಿಂದಿನ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಂವಿಧಾನದ ವಿಧಿ 19(1)(g) ಅಡಿ ಪ್ರತಿಯೊಬ್ಬ ನಾಗರಿಕನಿಗೂ ತನಗಿಷ್ಟ ಬಂದ ವ್ಯಾಪಾರ ಅಥವಾ ವೃತ್ತಿ ಮಾಡುವ ಸ್ವಾತಂತ್ರ್ಯವಿದೆ. ಆದರೆ ಹಣವನ್ನು ಪಣಕ್ಕಿಟ್ಟು ಆಡುವ ಜೂಜಾಟ ಅಥವಾ ಬೆಟ್ಟಿಂಗ್ ಪ್ರಕ್ರಿಯೆಯು ಈ ‘ಮೂಲಭೂತ ವ್ಯಾಪಾರದ ಹಕ್ಕಿನ’ ಅಡಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆಟವು ಕೌಶಲ್ಯ ಆಧಾರಿತವಾಗಿದ್ದರೂ ಹಣ ಪಣಕ್ಕಿಟ್ಟು ಆಡಿದಾಗ ಅದು ಜೂಜಾಗುತ್ತದೆ, ಅದಕ್ಕೆ ಕಾನೂನಿನ ರಕ್ಷಣೆ ನೀಡಲು ಸಾಧ್ಯವಿಲ್ಲ. ಸಾರ್ವಜನಿಕ ಸುವ್ಯವಸ್ಥೆ, ಯುವಜನರ ಹಿತರಕ್ಷಣೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಆನ್‌ಲೈನ್ ಬೆಟ್ಟಿಂಗ್ ಆಟಗಳನ್ನು ನಿಷೇಧಿಸುವ ಅಥವಾ ನಿಯಂತ್ರಿಸುವ ಸಂಪೂರ್ಣ ಕಾನೂನು ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಖಚಿತವಾಗಿ ಕೋರ್ಟ್‌ ಹೇಳಿದೆ.

ಆನ್‌ಲೈನ್ ಜೂಜಾಟದ ದಾಸರಾಗಿ ರಾಜ್ಯದ ಯುವ ಪೀಳಿಗೆ ಹಾದಿ ತಪ್ಪುತ್ತಿರುವುದನ್ನು ಮನಗಂಡಿದ್ದ ಕರ್ನಾಟಕ ಸರ್ಕಾರ 2021ರ ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಮಂಡಲದಲ್ಲಿ ‘ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ, 2021’ ಅಂಗೀಕರಿಸಿತ್ತು.

ಈ ಕಾನೂನಿನ ಪ್ರಕಾರ ಕರ್ನಾಟಕದಲ್ಲಿ ಹಣ ಅಥವಾ ಮೌಲ್ಯಯುತ ವಸ್ತುವನ್ನು ಪಣಕ್ಕಿಟ್ಟು ಆಡುವ ಆನ್‌ಲೈನ್ ಗೇಮ್‌ಗಳು, ಜೂಜಾಟಗಳು ಮತ್ತು ಬೆಟ್ಟಿಂಗ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ತಪ್ಪು ಮಾಡಿದವರಿಗೆ ದಂಡ ಮತ್ತು ಜೈಲು ಶಿಕ್ಷೆ ನೀಡುವ ಅವಕಾಶವಿದೆ. ಈ ಕಾನೂನನ್ನು ಪ್ರಶ್ನಿಸಿ ‘ಆನ್‌ಲೈನ್ ಗೇಮಿಂಗ್ ಫೆಡರೇಶನ್’ ಮತ್ತು ಗೇಮಿಂಗ್ ಕಂಪನಿಗಳು ಕೋರ್ಟ್‌ ಕದ ತಟ್ಟಿದ್ದವು.

ಅರ್ಜಿ ವಿಚಾರಣೆ ನಡೆಸಿದ್ದ ಧಾರವಾಡ ಮತ್ತು ಬೆಂಗಳೂರು ಪೀಠಗಳನ್ನೊಳಗೊಂಡ ಕರ್ನಾಟಕ ಹೈಕೋರ್ಟ್, 2022ರ ಫೆಬ್ರವರಿಯಲ್ಲಿ ಸರ್ಕಾರದ ಈ ತಿದ್ದುಪಡಿ ಕಾಯ್ದೆಯ ಪ್ರಮುಖ ನಿಯಮಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ನಿರಾಕರಿಸಿ, ರಾಜ್ಯಗಳ ಕಟ್ಟುನಿಟ್ಟಿನ ನಿಷೇಧದ ಕಾನೂನುಗಳನ್ನು ಎತ್ತಿಹಿಡಿದಿದೆ.

ರಾಜ್ಯದ ಗಡಿಯೊಳಗೆ ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಆ್ಯಪ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮತ್ತು ಯುವ ಪೀಳಿಗೆಯನ್ನು ಆನ್‌ಲೈನ್ ಜೂಜಿನ ದಾಸರಾಗದಂತೆ ಕಾನೂನು ಮೂಲಕ ತಡೆಯಲು ಈ ತೀರ್ಪು ರಾಜ್ಯ ಸರ್ಕಾರಗಳಿಗೆ ದೊಡ್ಡ ಶಕ್ತಿ ನೀಡಿದೆ.

Related Posts

Leave a Reply

Your email address will not be published. Required fields are marked *