ಎಲ್ಲ ಧರ್ಮಗುರು, ಪಕ್ಷದ ನಾಯಕರು, ಬೇರೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕಲಾವಿದರ ಶುಭಾಶಯ, ಆಶೀರ್ವಾದಗಳ ನಡುವೆ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹಾಜರಿದ್ದು ಅಭಿನಂದಿಸಿದ್ದು ಗಮನಾರ್ಹ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೇ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ನಾನೇ. ಸಿಎಂ ಪದವಿ ಹಂಚಿಕೆ ಅಗಬೇಕೆಂದು ಪಟ್ಟು ಹಿಡಿದು ಅದಕ್ಕಾಗಿ ಎಲ್ಲ ದೇವರನ್ನು ಕಂಡು ಹವನ- ಹೋಮ ಮಾಡಿ ಮೌನಕ್ಕೆ ಶರಣಾಗಿ ತಾಳ್ಮೆಯಿಂದ ಕಾದಿದ್ದರು. ಕೊನೆಗೆ ಅವರ ತಪಸ್ಸಿಗೆ ಫಲ ದೊರಕಿತು. ಎಲ್ಲ ಧರ್ಮಗುರು, ಪಕ್ಷದ ನಾಯಕರು, ನೆರೆಹೊರೆ ಮುಖ್ಯಮಂತ್ರಿಗಳು ಮತ್ತು ಚಿತ್ರ ಕಲಾವಿದರ ಶುಭಾಶಯ, ಆಶೀರ್ವಾದಗಳ ನಡುವೆ ಪ್ರಮಾಣ ವಚನ ಸ್ವೀಕರಿಸಿದರು. ನಿರ್ಗಮಿತ ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಹಾಜರಿದ್ದು ಅಭಿನಂದಿಸಿದ್ದು ಗಮನಾರ್ಹ. ಹಿಂದೆ ಎಂದೂ ನಿರ್ಗಮಿತ ಸಿಎಂ ಸಭೆಗೆ ಬರುತ್ತಿರಲಿಲ್ಲ. ಒಂದೇ ಒಂದು ಬಾರಿ ಜೆ.ಎಚ್. ಪಟೇಲ್ ಅವರು ಆಗಮಿಸಿ ಎಸ್.ಎಂ. ಕೃಷ್ಣ ಅವರನ್ನು ಸಿಎಂ ಕುರ್ಚಿಯಲ್ಲಿ ಕುಳ್ಳರಿಸಿ ಹೋದರು. ಆಗ ಅವರು ಇಬ್ಬರೂ ಬೇರೆ ಬೇರೆ ಪಕ್ಷದಲ್ಲಿದ್ದರು. ಈಗ ಅದೇ ಪಕ್ಷದ ಮಾಜಿ ಸಿಎಂ ಸಭೆಯಲ್ಲಿ ಭಾಗವಹಿಸಿದ್ದು ಸತ್ಸಂಪ್ರದಾಯ ರೂಪಿಸಿದ್ದಂತಾಗಿದೆ.
ಮುಖ್ಯಮಂತ್ರಿಯೊಂದಿಗೆ ಹಲವು ಸಚಿವರೂ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಹಳಬರು ಇದ್ದು, ಸಿದ್ದರಾಮಯ್ಯ ಅವರ ಪುತ್ರ ಮಾತ್ರ ಹೊಸಬರು. ಎರಡನೇ ಹಂತದಲ್ಲಿ ಮತ್ತಷ್ಟು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಿರಿಯರಲ್ಲಿ ಕೆಲವರು ಈಗಲೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಅದರೆ ಡಿಕೆಶಿ ಸರ್ಕಾರದ ಆಡಳಿತ ಮತ್ತು ಪಕ್ಷದ ಸಂಘಟನೆಯಲ್ಲಿ ನಿಪುಣರು. ಅವರಿಗೆ ಭಿನ್ನಮತ ನಿವಾರಿಸುವುದು ಕಷ್ಟದ ಕೆಲಸವೇನಲ್ಲ.
ಡಿಕೆ ಅಧಿಕಾರ ಸ್ವೀಕಾರದಿಂದ ಕಾಂಗ್ರೆಸ್ ಪಕ್ಷ ಹೊಸ ಆಯಾಮ ಪಡೆಯಲು ಸಾಧ್ಯವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿ ಸ್ವೀಕರಿಸಿದಾಗ ರಾಜಕೀಯ ಪರಿಸ್ಥಿತಿ ಬೇರೆ ಇತ್ತು. ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ಭಾವಿಸಿದ್ದವು. ಈಗ ಆ ಪರಿಸ್ಥಿತಿ ಇಲ್ಲ. ಕಾಂಗ್ರೆಸ್ ತಳವೂರಿದೆ. ತೆಲಂಗಾಣ, ಕರ್ನಾಟಕ ಮತ್ತು ಕೇರಳದಲ್ಲಿ ಕಾಂಗ್ರೆಸ್ ತನ್ನ ಸರ್ಕಾರ ಹೊಂದಿದೆ. ತಮಿಳುನಾಡಿನಲ್ಲಿ ವಿಜಯನ್ ಜನಪ್ರಿಯತೆಯಿಂದ ಆಡಳಿತದಲ್ಲಿ ಪಾಲುಗಾರಿಕೆ ಮುಂದುವರಿಸುವುದು ಕಷ್ಟವೇನಲ್ಲ. ಆದರೆ ಕೆಲವು ರಾಜಕೀಯ ನೀತಿಗಳನ್ನು ಇಂದಿನ ರಾಜಕೀಯ ಅಗತ್ಯಗಳಿಗೆ ತಕ್ಕಂತೆ ಬದಲಿಸಿಕೊಳ್ಳುವ ಸನ್ನಿವೇಶ ಒದಗಿಬಂದಿದೆ.
ಸಿದ್ದರಾಮಯ್ಯ ಕಾಲದಲ್ಲಿ ಅಹಿಂದ ಮತ್ತು ಮುಸ್ಲಿಮರ ಓಲೈಕೆ ಸಾಕಾಗಿತ್ತು. ಮೋದಿ ಮೇಲೆ ಆಗಾಗ್ಗೆ ಟೀಕಾಪ್ರಹಾರ ನಡೆಸುವುದು ಸಾಕಾಗಿತ್ತು. ಈಗ ಕಾಲ ಬದಲಾಗಿದೆ. ಹಿಂದೂತ್ವ ವಿರೋಧಕ್ಕಿಂತ ಮೆದು ಹಿಂದುತ್ವ ಪಾಲಿಸುವುದು ಸೂಕ್ತ ಎಂಬ ಭಾವನೆ ಮೂಡಿದೆ. ಅದರಿಂದ ಸಿಎಂ ಪ್ರಮಾಣವಚನ ಸ್ವೀಕರಿಸುವ ದಿಕ್ಕಿನ ವಾಸ್ತು ನೋಡುವುದರಿಂದ ಹಿಡಿದು ಹಳೆಯ ಸಂಪ್ರದಾಯ ಮತ್ತು ನಂಬಿಕೆ ಅನುಸರಿಸಲು ಹೊಸ ಸರ್ಕಾರ ತೀರ್ಮಾನಿಸಿದೆ. ಇದರಿಂದ ಹಿಂದೂಗಳ ವಿರೋಧ ಶಮನವಾಗುವುದರಲ್ಲಿ ಸಂದೇಹವಿಲ್ಲ. ಇದುವರೆಗೆ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಹೇಳುತ್ತಿದ್ದ ಪ್ರತಿಪಕ್ಷಗಳಿಗೆ ಈಗ ಬೇರೆ ವಿಷಯ ಹುಡುಕಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ತಮಿಳುನಾಡಿನಲ್ಲಿ ಎಲ್‌ಟಿಟಿಯ ನಾಯಕರ ಗುಣಗಾನ ನಡೆದರೂ ಕಾಂಗ್ರೆಸ್ ಮೌನವಹಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಅಧಿಕಾರವಹಿಸಿಕೊಂಡಿರುವ ಕಾಲ ಅತ್ಯಂತ ಕ್ಲಿಷ್ಟಕರ ಎಂದೇ ಹೇಳಬಹುದು. ಇನ್ನು ಎರಡು ವರ್ಷಗಳಲ್ಲಿ ಮತ್ತೆ ಚುನಾವಣೆ ಎದುರಿಸಬೇಕು. ಅಷ್ಟರಲ್ಲಿ ನಿಂತು ಹೋಗಿರುವ ಯೋಜನೆಗಳಿಗೆ ಚಾಲನೆ ಕೊಡಬೇಕು, ಮುಸ್ಲಿಂ ಓಲೈಕೆ ರಾಜಕೀಯ ತಿರುಗುಬಾಣ ವಾಗುತ್ತಿರುವುದರಿಂದ ಬೇರೆ ಮಾರ್ಗವನ್ನು ಕಂಡು ಕೊಳ್ಳಬೇಕು. ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ವ್ಯವಸ್ಥೆ ಮಾಡಲು ಸಾಲದ ಮೂಲ ಹುಡುಕಿಕೊಳ್ಳಬೇಕು. ಆದರೂ ಅವರ ರಾಜಕೀಯ ಗುರು ಎಸ್.ಎಂ. ಕೃಷ್ಣ ಅವರಿಗಿಂತ ಹೆಚ್ಚು ಬೆಂಗಳೂರು ನಗರವನ್ನು ಉನ್ನತೀಕರಿಸಬೇಕು. ಅಲ್ಲದೆ ಜೆಡಿಎಸ್ ಸೆರಗಿನಲ್ಲಿ ಕೆಂಡ ಆಗದಂತೆ ತಡೆಯುವುದೂ ಮುಖ್ಯ. ಡಿಕೆಶಿ ಸದಾ ಲವಲವಿಕೆಯಿಂದ ಇರುವ ಮನುಷ್ಯ. ಅದರಿಂದ ಪ್ರತಿಪಕ್ಷಗಳಿಗೆ ನಿದ್ದೆ ಕೆಡಿಸುವುದಂತೂ ನಿಜ.


