ಹಾಸನ ಜಿಲ್ಲೆಯ ಸಕಲೇಶಪುರದ ಯುವಕನೊಬ್ಬ ಶಿವಮೊಗ್ಗ ನಗರದ ಹೊರವಲಯದ ಪುರಲೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಂಕೇತ್ (19) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಸಂಕೇತ್ ಐಟಿಐ ವ್ಯಾಸಂಗವನ್ನು ಮುಗಿಸಿ ಯಾವುದೇ ಕೆಲಸಕ್ಕೆ ಸೇರದೆ ಮನೆಯಲ್ಲೇ ಇದ್ದ. ತಂದೆ ಕೆಲಸಕ್ಕೆ ಹೋಗುವಂತೆ ಬುದ್ದಿವಾದ ಹೇಳಿದ್ದರು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರ ಪುರಲೆ ಕೆರೆಯಲ್ಲಿ ಯುವಕನ ಶವ ತೇಲುತ್ತಿರುವುದು ಪತ್ತೆಯಾಗಿದೆ. ಗಮನಿಸಿದ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವ ಮೇಲಕ್ಕೆತ್ತಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಶಿವಮೊಗ್ಗದ ಹೊಸನಗರ ತಾಲೂಕಿನ ತಟ್ಟೆಕೊಡ್ಲು ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ರಾಮಚಂದ್ರ ರಾವ್ (85) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂಗಲ್ ಬ್ಯಾರಲ್ ಬಂದೂಕಿನಿಂದ ತನ್ನ ಕುತ್ತಿಗೆ ಸಮೀಪ ಗುಂಡು ಹಾರಿಸಿಕೊಂಡಿದ್ದು, ತಲೆ ಭಾಗ ಸಂಪೂರ್ಣವಾಗಿ ಛಿದ್ರವಾಗಿದೆ.
ರಾಮಚಂದ್ರ ರಾವ್ ಕಳೆದ ಮೂರು ದಿನಗಳ ಹಿಂದೆ ಬಿದ್ದು ತಲೆಗೆ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗಾಯದಿಂದ ಉಂಟಾದ ನೋವು ಕಡಿಮೆಯಾಗಿರಲಿಲ್ಲ. ಇದರಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂದೂಕಿಗೆ ಪರವಾನಗಿ ಇದೆಯೋ ಇಲ್ಲವೋ ಎಂಬ ಪರಿಶೀಲನೆ ಸೇರಿದಂತೆ, ಟ್ರಿಗರ್ ಹೇಗೆ ಪ್ರೆಸ್ ಆಗಿದೆ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.


