ಉದಯಕಾಲ ನ್ಯೂಸ್, ಕಾರವಾರ: ಭಾರತೀಯ ನೌಕಾಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸುವ ಹಾಗೂ ‘ಆತ್ಮನಿರ್ಭರ ಭಾರತ’ (Atmanirbhar Bharat) ಸಂಕಲ್ಪಕ್ಕೆ ಮತ್ತೊಂದು ಗರಿಮೆ ತಂದುಕೊಡುವ ನಿಟ್ಟಿನಲ್ಲಿ, ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲ್ಪಟ್ಟ ಅತ್ಯಾಧುನಿಕ ‘ಐಎನ್ಎಸ್ ಸಮರ್ಥಕ್’ಯುದ್ಧನೌಕೆಯನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಕದಂಬಾ ನೌಕಾ ನೆಲೆಯಲ್ಲಿ ದೇಶದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಅಧಿಕೃತವಾಗಿ ರಾಷ್ಟ್ರಕ್ಕೆ ಸಮರ್ಪಿಸಿದರು.
ಚೋಳರ ರಾಜವಂಶ ಹಾಗೂ 1971ರ ಯುದ್ಧ ಸ್ಮರಿಸಿದ ಉಪರಾಷ್ಟ್ರಪತಿ
ಲೋಕಾರ್ಪಣಾ ಸಮಾರಂಭದ ಬಳಿಕ ಮಾತನಾಡಿದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, *”ನಾನು ಚಿಕ್ಕವರಾಗಿದ್ದಾಗ 1971ರ ಯುದ್ಧದಲ್ಲಿ ಕರಾಚಿಯಿಂದ ಬಂದ ಶತ್ರುಗಳ ಸಬ್ಮೆರಿನ್ ಅನ್ನು ಭಾರತೀಯ ನೌಕಾಪಡೆ ಹೊಡೆದುರುಳಿಸಿದ ವಾರ್ತೆಯನ್ನು ಆಕಾಶವಾಣಿಯಲ್ಲಿ ಕೇಳಿದಾಗ ಮೈ ರೋಮಾಂಚನಗೊಂಡಿತ್ತು” ಎಂದು ಬಾಲ್ಯದ ನೆನಪುಗಳನ್ನು ಮೆಲುಕುಹಾಕಿದರು.
ಮುಂದುವರಿದು ಮಾತನಾಡಿದ ಅವರು, ಐತಿಹಾಸಿಕವಾಗಿ ರಾಜ ರಾಜಚೋಳ ಹಾಗೂ ರಾಜೇಂದ್ರ ಚೋಳರು ತಮ್ಮ ಬಲಿಷ್ಠ ನೌಕಾಸೇನೆಯ ನೆರವಿನಿಂದ ಬಂಗಾಳಕೊಲ್ಲಿಯಿಂದ ದಕ್ಷಿಣ ಪೂರ್ವ ಏಷ್ಯಾದ ಅನೇಕ ದೇಶಗಳ ಮೇಲೆ ಹಿಡಿತ ಸಾಧಿಸಿದ್ದ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದರು. ಅಂದು ಸಾಮಾನ್ಯ ನೌಕಾಬಲವಾಗಿ ಆರಂಭಗೊಂಡ ಭಾರತೀಯ ನೌಕಾಸೇನೆ ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ಸಂಪೂರ್ಣ ಸ್ವಾವಲಂಬಿಯಾಗಿ ಹೊರಹೊಮ್ಮಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಅಲ್ಲದೆ, ದೇಶದ ರಕ್ಷಣಾ ಉತ್ಪಾದನಾ ನೆಲೆಯನ್ನು ಬಲಪಡಿಸುವಲ್ಲಿ ಲಾರ್ಸನ್ ಆ್ಯಂಡ್ ಟುಬ್ರೋ (L&T) ಮುಂತಾದ ಖಾಸಗಿ ಉದ್ಯಮಗಳು ವಹಿಸುತ್ತಿರುವ ಮಹತ್ವದ ಪಾತ್ರವನ್ನು ಶ್ಲಾಘಿಸಿದರು.
ಸಮರ್ಥ ಭಾರತದ ಸಂಕೇತ – ‘INS ಸಮರ್ಥಕ್’
ಶಕ್ತಿಯ ಸಂಕೇತವಾಗಿರುವ ‘INS ಸಮರ್ಥಕ್’ ಯುದ್ಧನೌಕೆಯು ಆತ್ಮವಿಶ್ವಾಸದಿಂದ ಕೂಡಿದ ಹಾಗೂ ಸಮರ್ಥ ಭಾರತವನ್ನು ಮುಂದಕ್ಕೆ ಕೊಂಡೊಯ್ಯಲಿದೆ ಎಂದು ಬಣ್ಣಿಸಿದ ಉಪರಾಷ್ಟ್ರಪತಿಗಳು, ಈ ನೌಕೆಯು ಸುರಕ್ಷಿತ ಸಮುದ್ರಯಾನ ನಡೆಸಿ ದೇಶದ ಉಜ್ವಲ ಭವಿಷ್ಯಕ್ಕೆ ವಿಶೇಷ ಕೊಡುಗೆ ನೀಡಲಿ ಎಂದು ಹಾರೈಸಿದರು. ನೌಕಾದಳದ ಸಿಬ್ಬಂದಿ ಸಮುದ್ರದಲ್ಲಿ ದೇಶದ ಭದ್ರತೆಗಾಗಿ ಹಗಲಿರುಳು ಶ್ರಮಿಸುತ್ತಿರುವುದರಿಂದಲೇ ಭೂಮಿಯ ಮೇಲಿರುವ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಗಳಾದ ಅಡ್ಮಿರಲ್ ಕೃಷ್ಣಸ್ವಾಮಿನಾಥನ್, ಕರ್ನಾಟಕ ಫ್ಲಾಗ್ ಆಫೀಸರ್ ವಿಕ್ರಮ್ ಮೆನನ್, ರಾಜ್ಯ ಸರ್ಕಾರದ ಸಚಿವರಾದ ಸಂತೋಷ್ ಲಾಡ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸ್ವದೇಶಿ ನಿರ್ಮಿತ ಯುದ್ಧನೌಕೆಯ ಸೇರ್ಪಡೆಯು ಭಾರತದ ಕಡಲ ಗಡಿಗೆ ಮತ್ತಷ್ಟು ಐತಿಹಾಸಿಕ ಭದ್ರತಾ ಕವಚವನ್ನು ಒದಗಿಸಿದೆ.
#INSSamarthak #KarwarNavyBase #CPRadhakrishnan #IndianNavy #UdayakalaNews #AtmanirbharBharat #KadambaNavalBase #DefenseNewsKannada #MakeInIndia #SantoshLad


