ಉದಯಕಾಲ ನ್ಯೂಸ್, ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ (Nandi Hills) ಪಕ್ಕದಲ್ಲಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಸ್ಫೋಟದಂತಹ ಭೀಕರ ಸದ್ದಿನೊಂದಿಗೆ ಬೃಹತ್ ಕಲ್ಲುಬಂಡೆಗಳು ಕಣಿವೆಯತ್ತ ಉರುಳಿಬಿದ್ದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಸಮೀಪವಿರುವ ಬ್ರಹ್ಮಗಿರಿ ಬೆಟ್ಟದ ಮೇಲ್ಭಾಗದಲ್ಲಿದ್ದ ಬೃಹತ್ ಬಂಡೆಯೊಂದು ಆಕಸ್ಮಿಕವಾಗಿ ಮುರಿದು ಕೆಳಗೆ ಕಣಿವೆಯತ್ತ ಭೀಕರ ಶಬ್ದದೊಂದಿಗೆ ಉರುಳಿದೆ. ಈ ವೇಳೆ ಕೇಳಿಬಂದ ಭಾರೀ ಸ್ಫೋಟದಂತಹ ಸದ್ದಿಗೆ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳ ಜನರು ಬೆಚ್ಚಿಬಿದ್ದು ಹೊರಬಂದಿದ್ದಾರೆ.
ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ
ಬೆಟ್ಟದ ಮೇಲಿನಿಂದ ಬೃಹತ್ ಕಲ್ಲುಬಂಡೆಗಳು ಕೆಳಗೆ ಉರುಳುತ್ತಿರುವ ಭಯಾನಕ ದೃಶ್ಯವನ್ನು ಕಣಿವೆಪುರ ಗ್ರಾಮದ ಸಮೀಪದಿಂದ ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ. ಬಂಡೆಗಳು ಕೆಳಗೆ ಉರುಳುವ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಧೂಳು ಪಸರಿಸಿರುವ ದೃಶ್ಯಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ತಪ್ಪಿದ ಭಾರಿ ಅನಾಹುತ
ಅದೃಷ್ಟವಶಾತ್ ಬಂಡೆಗಳು ಉರುಳಿಬಿದ್ದ ಸಂದರ್ಭದಲ್ಲಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ದನಗಾಹಿಗಳು ಹಾಗೂ ಕುರಿಗಾಹಿಗಳು ಯಾರೂ ಇರಲಿಲ್ಲ. ಇದರಿಂದಾಗಿ ಸಂಭವಿಸಬಹುದಿದ್ದ ದೊಡ್ಡ ಮಟ್ಟದ ಜೀವಹಾನಿ ಹಾಗೂ ಅನಾಹುತ ತಪ್ಪಿದಂತಾಗಿದೆ. ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಈ ಬ್ರಹ್ಮಗಿರಿ ಬೆಟ್ಟದಲ್ಲಿ ಬೃಹತ್ ಬಂಡೆಗಳು ಆಕಸ್ಮಿಕವಾಗಿ ಮುರಿದು ಬೀಳಲು ನಿಖರ ಕಾರಣವೇನು ಎಂಬುದು ಅರಣ್ಯ ಇಲಾಖೆಯ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಪ್ರಸಿದ್ಧ ಪ್ರವಾಸಿ ತಾಣ ಹಾಗೂ ನಂದಿಬೆಟ್ಟದ ಸಾಲಿನಲ್ಲಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
#NandiHills #BrahmagiriHill #ChikkaballapuraNews #Landslide #UdayakalaNews #KarnatakaNews #HillockCollapse #NatureNewsKannada


