ಭಾರತ, ಚೀನಾ ಕೇವಲ ನರಕದ ಕೂಪಗಳು, ಇವುಗಳು ನಾಗರಿಕತೆಯ ತೊಟ್ಟಿಲುಗಳಲ್ಲ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾರತೀಯ ಮತ್ತು ಚೀನೀ ತಜ್ಞರು ಗ್ಯಾಂಗ್ಸ್ಟರ್ಸ್ ವಿತ್ ಲ್ಯಾಪ್ಟಾಪ್ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೀಯಾಳಿಸಿದ್ದಾರೆ.
ಟ್ರಂಪ್ ಭಾರತ ಮತ್ತು ಚೀನಾ ವಲಸಿಗರ ವಿರುದ್ಧ ವಾಗ್ದಾಳಿತೀವ್ರಗೊಳಿಸಿದ್ದು, ಜನ್ಮಸಿದ್ಧ ಪೌರತ್ವದ ನಿಯಮವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ರೇಡಿಯೋ ನಿರೂಪಕ ಮೈಕೆಲ್ ಸ್ಯಾವೇಜ್ ಬರೆದ ವಿವಾದಾತ್ಮಕ ಪತ್ರವನ್ನು ಹಂಚಿಕೊಂಡಿದ್ದಾರೆ. ಈ ಪತ್ರದಲ್ಲಿ ಭಾರತ ಮತ್ತು ಚೀನಾವನ್ನು ಕೇವಲ ನರಕದ ಕೂಪಗಳುಎಂದು ಕರೆಯುವುದರ ಜೊತೆಗೆ ಇವುಗಳು “ನಾಗರಿಕತೆಯ ತೊಟ್ಟಿಲುಗಳಲ್ಲ” ಎಂದು ಹೀಯಾಳಿಸಲಾಗಿದೆ.
ಅಮೆರಿಕನ್ನರ ಉದ್ಯೋಗಗಳನ್ನು ಭಾರತೀಯರು ಮತ್ತು ಚೀನಿಯರು ಕಿತ್ತುಕೊಳ್ಳುತ್ತಿದ್ದಾರೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾರತೀಯ ಮತ್ತು ಚೀನೀ ತಜ್ಞರು ಗ್ಯಾಂಗ್ಸ್ಟರ್ಸ್ ವಿತ್ ಲ್ಯಾಪ್ಟಾಪ್. ಅವರು ಅಮೆರಿಕದ ತಂತ್ರಜ್ಞಾನ ವ್ಯವಸ್ಥೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಟ್ರಂಪ್ ದೂರಿದ್ದಾರೆ.
ಇವರೆಲ್ಲ ಅಮೆರಿಕದ ಧ್ವಜವನ್ನು ಗೌರವಿಸುವುದಿಲ್ಲ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಜನರು ಪ್ರವಾಸಿ ವೀಸಾದಲ್ಲಿ ಅಮೆರಿಕಕ್ಕೆ ಬಂದು, ಮಗುವಿಗೆ ಜನ್ಮ ನೀಡಿ, ಮಗುವಿಗೆ ಜನ್ಮಸಿದ್ಧವಾಗಿ ಸಿಗುವ ಅಮೆರಿಕದ ಪೌರತ್ವಪಡೆಯುತ್ತಿದ್ದಾರೆ. ಇದು ಅಮೆರಿಕದ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಗರ್ಭಿಣಿಯರು 9ನೇ ತಿಂಗಳಲ್ಲಿ ಅಮೆರಿಕಕ್ಕೆ ಬಂದು ಮಗು ಹೆರುವ ಮೂಲಕ ಪೌರತ್ವ ಪಡೆಯುವ ʼಹೆರಿಗೆ ಪ್ರವಾಸʼವನ್ನು ನಿಲ್ಲಿಸಲಾಗುವುದು. ಜನ್ಮಸಿದ್ಧ ಪೌರತ್ವವನ್ನು ನೀಡಲು ಅನುಮತಿಸುವ ವಿಶ್ವದ ಏಕೈಕ ಮೂರ್ಖ ದೇಶ ಅಮೆರಿಕ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಪೌರತ್ವ ಗೌರವದ ಸಂಕೇತವಾಗಿರಬೇಕೇ ಹೊರತು, ಪ್ರವಾಸಿಗರು ಮತ್ತು ವಿದೇಶಿಯರು ಅಕ್ರಮವಾಗಿ ಪಡೆಯುವ ಉಡುಗೊರೆಯಾಗಬಾರದು ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.


