ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಮತ್ತು ಬಿಜೆಪಿ ನೆರವಿನಿಂದ ಮತ್ತೊಂದು ಸಾರಿ ರಾಜ್ಯಸಭೆಗೆ ಆಯ್ಕೆಯಾಗಬೇಕೆಂದು ದೇವೇಗೌಡರು ಬಯಸಿರುವಾಗ, ರಾಜ್ಯದಲ್ಲಿ ಜೆಡಿಎಸ್ ಪಾರ್ಟಿಯ ಜಾತ್ಯತೀತ ಐಡೆಂಟಿಟಿ ಇನ್ನೆಷ್ಟು ದಿನ ಎಂಬುದೀಗ ಬಹು ಚರ್ಚಿತ ವಿಷಯವಾಗಿದೆ.
ಜಾತ್ಯತೀತ ಜನತಾದಳ, ಬಿಜೆಪಿ ಜೊತೆ ರಾಜಕೀಯವಾಗಿ ಸಾರ್ವಕಾಲಿಕ ರಾಜಿ ಹೊಂದಲು ಸಾಧ್ಯವೇ ? ರಾಜ್ಯದಲ್ಲಿ ಇನ್ನೂ ಪಕ್ಷದ ಬೇರುಗಳನ್ನು ಉಳಿಸಿಕೊಂಡಿರುವ ಈ ಪಕ್ಷದ ರೂವಾರಿಗಳ ಮನದಲ್ಲೀಗ ಜಾತ್ಯತೀತತೆಯ ಜಿಜ್ಞಾಸೆ ,ಮಂಥನ ಶುರುವಾಗಿದೆ. ಅಧಿಕಾರ ಅನುಭವಿಸಲು ಕಾಲಕಾಲಿಕ ರಾಜೀ ಮತ್ತು ಹೊಂದಾಣಿಕೆ ಮಾಡಿಕೊಳ್ಳುವುದು ಸಹಜ. ಆದರೆ ಸುದೀರ್ಘ ರಾಜಕಾರಣದಲ್ಲಿ ಪಕ್ಷವೊಂದು ತನ್ನ ನಿಲುವು ಮತ್ತು ಉದ್ದೇಶಗಳನ್ನು ಪದೇ ಪದೇ ಬದಲಾಯಿಸಿದಲ್ಲಿ ಇದು ಮತದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಸಹಜ.
ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ, ಒಂದು ಧರ್ಮ, ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗಿ ರಾಜಕಾರಣವನ್ನು ಮುಂದುವರಿಸಲು ಸಾಧ್ಯವಿಲ್ಲ. ಒಂದು ವೇಳೆ ಸೀಮಿತ ಧೋರಣೆಗಳಿಂದ ಈ ಪಕ್ಷ ಮುಂದುವರಿದರೆ ಭವಿಷ್ಯದಲ್ಲಿ ಜಾತ್ಯತೀತ ಜನತಾದಳ ಎಂಬ ಪಕ್ಷವೇ ರಾಜ್ಯದ ರಾಜಕೀಯ ಪಡಸಾಲೆಯಿಂದ ಮರೆಯಾಗುವುದು ಖಂಡಿತ.
ಬಿಜೆಪಿ ಜೊತೆ ಮೈತ್ರಿ ಹೊಂದಿದ್ದರೂ, ತಮ್ಮ ಪಕ್ಷದ ಸಿದ್ದಾಂತಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದು ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನಿಲುವು. ಅದೇನೆ ಇರಲಿ. ರಾಜ್ಯ ರಾಜಕಾರಣದಲ್ಲಿ ಈ ಪಕ್ಷ ನಡೆದು ಬಂದ ದಾರಿಯನ್ನು ನೋಡಿದಾಗ, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದಲಿತರನ್ನು ನೆಚ್ಚಿಕೊಂಡು ರಾಜಕೀಯವಾಗಿ ಮೇಲೆದ್ದು ಬಂದಿರುವುದು ಕಟುವಾಸ್ತವ. ದೇವೇಗೌಡರು ಹುಟ್ಟು ಹಾಕಿದ ಜಿಡಿಎಸ್ ಒಂದು ಸಾರಿ ಕಾಂಗ್ರೆಸ್ ಜೊತೆ, ಮತ್ತೊಂದು ಸಾರಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಅನುಭವಿಸಿರುವುದನ್ನು ರಾಜಕೀಯ ನಗ್ನಸತ್ಯ. ಇದು ಒಂದರ್ಥ ದಲ್ಲಿ ರಾಜ್ಯ ರಾಜಕಾರಣದಲ್ಲಿ ಕಾಮನ್ ಎಂಬಂತಿದೆ. ಆದರೆ ಯಾವಾಗಲೂ ಕಿಂಗ್ ಮೇಕರ್ ಆಗಿರುವ ಜೆಡಿಎಸ್ ತನ್ನ ಸ್ವಂತ ಬಲದ ಮೇಲೆ ಕಿಂಗ್ ಆಗಲು ಯಾಕೆ ಸಾಧ್ಯವಾಗಿಲ್ಲ ? ದೇಶದ ಪ್ರಸಕ್ತ ರಾಜಕೀಯ ಸನ್ನಿವೇಶ ಮತ್ತು ಪರಿಸ್ಥಿತಿಯಲ್ಲಿ ಮೈತ್ರಿ ರಾಜಕಾರಣ ಅನಿವಾರ್ಯ ಎಂಬುದೇನೋ ಸರಿ. ಆದರೆ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ದ್ರಾವಿಡ ಪಕ್ಷಗಳಾದ ಡಿಎಂಕೆ ಹಾಗೂ ತೆಲುಗುದೇಶಂ ಮಾದರಿಯಲ್ಲಿ ಕರ್ನಾಟಕದಲ್ಲಿ ಸ್ಪಷ್ಟ ಜನಾದೇಶ ಪಡೆಯುವ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿಲ್ಲ.
ರಾಜ್ಯದ ಮುಸ್ಲಿಂ, ಕ್ರೈಸ್ತರು ಮತ್ತು ದಲಿತ ಸಮುದಾಯದ ರಾಜಕೀಯ ಮನೋಧೋರಣೆಯೂ ಬದಲಾಗುತ್ತಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮುಸ್ಲಿಂ ಮತ್ತು ದಲಿತರ ಓಟ್ ಬ್ಯಾಂಕುಗಳನ್ನು ಕಳೆದುಕೊಳ್ಳುವ ಅಪಾಯದ ಅಂಚು ತಲುಪಿದೆ. ತಮಗೆ ದೊರಕದ ಸೂಕ್ತ ಪ್ರಾತಿನಿಧ್ಯ, ಒಳಮೀಸಲಾತಿ ಇವೆಲ್ಲವೂ ಈಗ ಜೆಡಿಎಸ್, ತನ್ನ ರಾಜಕೀಯ ಬಲವನ್ನು ಹೆಚ್ಚಿಸಿಕೊಳ್ಳಲು ಪೂರಕವಾಗಿರುವ ಸಂಗತಿಗಳು. ಆದರೆ ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಮತ್ತು ಬಿಜೆಪಿ ನೆರವಿನಿಂದ ಮತ್ತೊಂದು ಸಾರಿ ರಾಜ್ಯಸಭೆಗೆ ಆಯ್ಕೆಯಾಗಬೇಕೆಂದು ದೇವೇಗೌಡರು ಬಯಸಿರುವಾಗ ಜೆಡಿಎಸ್ ಪಾರ್ಟಿಯ ಜಾತ್ಯತೀತ ಐಡೆಂಟಿಟಿ ಇನ್ನೆಷ್ಟು ದಿನ ಬಾಳಿಕೆ ಬರುತ್ತೆ ಎಂಬುದೀಗ ಬಹು ಚರ್ಚಿತ ಸಂಗತಿ. ಒಟ್ಟಿನಲ್ಲಿ ದಾವಣಗೆರೆ ಉಪ ಚುನಾವಣೆ ಸಂಬಂಧಿತವಾಗಿ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಮುಸ್ಲಿಂ ಸಮುದಾಯ ಈಗೆತ್ತಿರುವ ಬೇಡಿಕೆಗಳು ಮತ್ತು ಹಕ್ಕುಗಳು, ಪ್ರತ್ಯಕ್ಷ, ಪರೋಕ್ಷವಾಗಿ ಜೆಡಿಎಸ್ ಭವಿಷ್ಯವನ್ನೂ ನಿರ್ಧರಿಸುವಂತಹದು.


