Menu

ಎಲ್ಲ ವಲಯದಲ್ಲೂ ಋತುಚಕ್ರ ರಜೆ ಕಡ್ಡಾಯ ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

Karnataka High Court

18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ‘ಋತುಚಕ್ರ ರಜೆ’ ನೀತಿಯನ್ನು ರಾಜ್ಯ ಸರ್ಕಾರವು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ಈ ಹಿಂದೆ ರಾಜ್ಯ ಸರ್ಕಾರ ಮಹಿಳೆಯರ ಮುಟ್ಟಿನ ರಜೆಗೆ ಅನುಮೋದನೆ ನೀಡಿದ್ದರೂ ಕೆಲವೊಂದು ಕಂಪನಿಗಳು ಹಾಗೂ ಸಂಸ್ಥೆಗಳು ಮಹಿಳಾ ಉದ್ಯೋಗಿಗಳಿಗೆ ಈ ರಜೆ ನೀಡುತ್ತಿಲ್ಲ. ಇದನ್ನು ಸರಿಯಾದ ರೀತಿ ಹಾಗೂ ಕಡ್ಡಾಯವಾಗಿ ಜಾರಿಗೆ ತರುವಂತೆ ಹೈಕೋರ್ಟ್​​ ಆದೇಶಿಸಿದೆ.

ನೋಂದಾಯಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ 18 ರಿಂದ 52 ವರ್ಷದೊಳಗಿನ ಮಹಿಳಾ ನೌಕರರಿಗೆ ಈ ರಜೆ ಅನ್ವಯವಾಗುತ್ತದೆ. ಶಾಶ್ವತ, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ವಿಸ್ತರಣೆ ಮಾಡಬೇಕು ಎಂದು ಹೇಳಿದೆ. ಸಾಫ್ಟ್‌ವೇರ್ ಅಥವಾ ದೊಡ್ಡ ಕಂಪನಿಗಳಲ್ಲದೆ, ಹೋಟೆಲ್ ಕೆಲಸಗಾರರು, ದಿನಗೂಲಿ ನೌಕರರು ಸೇರಿದಂತೆ ಅಸಂಘಟಿತ ವಲಯದ ಮಹಿಳೆಯರಿಗೂ ಈ ಸೌಲಭ್ಯ ತಲುಪುವಂತೆ ಮಾರ್ಗಸೂಚಿಗಳನ್ನು ಹೊರಡಿಸಲು ಸರ್ಕಾರಕ್ಕೆ ಸೂಚಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, “ಮಹಿಳೆಯರ ಋತುಸ್ರಾವದ ಆರೋಗ್ಯವು ಸಂವಿಧಾನದ 21ನೇ ವಿಧಿಯಡಿ ಬರುವ ‘ಬದುಕುವ ಹಕ್ಕಿನ’ ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ರಜೆಯಲ್ಲ, ಮಹಿಳೆಯರ ಘನತೆಯ ಪ್ರಶ್ನೆ” ಎಂದು ಹೇಳಿದೆ.

ಪ್ರಸ್ತುತ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರ ಜೊತೆಗೆ ಈ ಕುರಿತು ಪ್ರಸ್ತಾವಿತ ‘ಕರ್ನಾಟಕ ಋತುಸ್ರಾವ ರಜೆ ಮತ್ತು ನೈರ್ಮಲ್ಯ ವಿಧೇಯಕ-2025’ನ್ನು ಶೀಘ್ರವಾಗಿ ಕಾನೂನಾಗಿ ರೂಪಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ. ಬೆಳಗಾವಿ ಮೂಡಲಗಿಯ ಹೋಟೆಲ್ ನೌಕರರೊಬ್ಬರು ತಮಗೆ ರಜೆ ನೀಡುತ್ತಿಲ್ಲ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ.

Related Posts

Leave a Reply

Your email address will not be published. Required fields are marked *