ಮಹಿಳಾ ಮೀಸಲಾತಿ, ಗಡಿ ನಿರ್ಣಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ವಿಧೇಯಕ 2026 ಲೋಕಸಭೆಯಲ್ಲಿ ಮಂಡನೆಯಾಗಿವೆ. ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯ ಬಲವನ್ನು ಪ್ರಸ್ತುತ ಇರುವ 543 ರಿಂದ 850 ಸ್ಥಾನಗಳಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ವಿಧೇಯಕವು ಒಳಗೊಂಡಿದೆ. ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನೂ ವಿಸ್ತರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದು ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ನಡೆಯಲಿದೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ವಿಧೇಯಕವನ್ನು ಮಂಡಿಸಿದ್ದು, ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ವಿರೋಧಿಸಿದರು. ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಾವೆಲ್ಲರೂ ಮಹಿಳಾ ಮೀಸಲಾತಿಯ ಪರವಾಗಿದ್ದೇವೆ. ಆದರೆ ಸರ್ಕಾರ ಕ್ಷೇತ್ರ ಪುನರ್ವಿಂಗಡಣೆಯ ಹೆಸರಿನಲ್ಲಿ ಸರ್ಕಾರ ತಂತ್ರಗಳನ್ನು ಆಡುತ್ತಿದೆ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.
ಸರ್ಕಾರವು ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ನಂತರವೇ ಮೀಸಲು ಜಾರಿಯಾಗಲಿದೆ ಎಂಬ ಷರತ್ತು ವಿಧಿಸಿದು, ಇದು ಮೀಸಲಾತಿಯನ್ನು ಇನ್ನಷ್ಟು ವಿಳಂಬ ಮಾಡುವ ತಂತ್ರ ಎಂದು ಪ್ರತಿಪಕ್ಷಗಳು ಅರೋಪಿಸಿವೆ. 2023ರಲ್ಲೇ ಸಂವಿಧಾನಕ್ಕೆ 334(A) ವಿಧಿ ಸೇರಿಸಿ ಒಮ್ಮತ ಮೂಡಿಸಲಾಗಿತ್ತು. ಮುಂಬರುವ ಲೋಕಸಭೆ ಚುನಾವಣೆಯಿಂದಲೇ ಇದನ್ನು ಜಾರಿಗೆ ತರಲು ಏನು ಸಮಸ್ಯೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಪ್ರಶ್ನಿಸಿದ್ದರು.
ಗಡಿ ನಿರ್ಣಯ ವಿಧೇಯಕ 2026 ಹಳೆಯ ಡಿಲಿಮಿಟೇಶನ್ ಕಾಯ್ದೆ 2002 ಅನ್ನು ರದ್ದುಗೊಳಿಸುತ್ತದೆ ಮತ್ತು ಬದಲಾಯಿಸುತ್ತದೆ. ಹೊಸ ಡಿಲಿಮಿಟೇಶನ್ ಆಯೋಗವನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ. ಆಯೋಗವು ಕ್ಷೇತ್ರಗಳ ಗಡಿಗಳನ್ನು ಮರು ವ್ಯಾಖ್ಯಾನಿಸುತ್ತದೆ ಮತ್ತು ಇತ್ತೀಚಿನ ಜನಗಣತಿ ದತ್ತಾಂಶವನ್ನು ಆಧರಿಸಿ (2011) ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಸ್ಥಾನಗಳನ್ನು ಹಂಚುತ್ತದೆ.
ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ವಿಧೇಯಕ 2026 ಈ ಮಸೂದೆಯು ರಾಜ್ಯಗಳ ಶಾಸಕಾಂಗ ಸಭೆಗಳಲ್ಲಿ ಹಾಗೂ ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿಯಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರಿಗೆ 33% ಮೀಸಲು ಜಾರಿಗೆ ತರಲು ದಾರಿ ಮಾಡಿಕೊಡುತ್ತದೆ.
ಅಧಿವೇಶನದಲ್ಲಿ ಈ ವಿಷಯದ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಮೋದಿ ಸರ್ಕಾರವು ವಿರೋಧ ಪಕ್ಷಗಳನ್ನು ನಿಗ್ರಹಿಸಲು ಮತ್ತು ಚುನಾವಣಾ ಲಾಭ ಪಡೆಯಲು ಈ ರೀತಿ ವರ್ತಿಸುತ್ತಿದೆ. ನಾವು ಸಂಸತ್ತಿನ ಒಳಗೆ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಪ್ರತಿಪಕ್ಷಗಳ ನಾಯಕರು ಹೇಳಿದ್ದಾರೆ.


