ಸಾಲ ಕೊಡಲಿಲ್ಲ ಎಂಬ ಕೋಪಕ್ಕೆ ಸಾಲ ಕೊಡುವ ಮೀಟರ್ ಬಡ್ಡಿ ದಂಧೆಕೋರನನ್ನೇ ಅಪಹರಿಸಿದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬಡ್ಡಿ ದಂಧೆಕೋರ ಮುಂಡಗೋಡ ನಿವಾಸಿ ಜಮೀರ್ ದರ್ಗಾವಲೆಯ ಬಳಿ ಬಡ್ಡಿ ವಸೂಲಿ ಕೆಲಸ ಮಾಡುತ್ತಿದ್ದ ಖ್ವಾಜಾ ಅಪಹರಣಕಾರ. ಖ್ವಾಜಾಗೆ ಸಾಲ ಬೇಕಿತ್ತು. ಆದರೆ ಸಾಲ ಕೊಡಲು ಜಮೀರ್ ಒಪ್ಪಿರಲಿಲ್ಲ. ಈ ಕೋಪಕ್ಕೆ ಅಪಹರಣ ಮಾಡಿದ್ದ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಜಮೀರ್ ದರ್ಗಾವಲೆಯ ಬೈಕ್ಗೆ ಗುದ್ದಿ ಬಳಿಕ ಆತನನ್ನು ಕಾರಿನಲ್ಲಿ ಹೊತ್ತೊಯ್ಯಲಾಗಿತ್ತು. ಜಮೀರ್ ಕುಟುಂಬಸ್ಥರಿಗೆ ಕರೆ ಮಾಡಿದ ಅಪಹರಣ ಕಾರರು 32 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಕುಟುಂಬಸ್ಥರು ಕೂಡಲೇ 18 ಲಕ್ಷ ರೂಪಾಯಿ ತಲುಪಿಸಿದ್ದರು. ಬಳಿಕ ಜಮೀರ್ನನ್ನು ಹಾವೇರಿ ಯಲ್ಲಿ ಬಿಟ್ಟು ಪರಾರಿ ಆಗಿದ್ದ ನಾಲ್ಕು ತಂಡವನ್ನು ಪೊಲೀಸರು ಮಟ್ಟ ಹಾಕಿ ಒಟ್ಟು ಹದಿಮೂರು ಜನರನ್ನು ಬಂಧಿಸಿದ್ದಾರೆ.
ಆರೋಪಿಗಳ ತಂಡದ ಕಿಂಗ್ ಪಿನ್ ಮುಂಬೈನಲ್ಲಿ ತಲೆ ಮರೆಸಿಕೊಂಡಿದ್ದ. ನಿರಂತರ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಸತ್ಯಗಳು ಹೊರ ಬಂದಿವೆ. ಜಮೀರ್ ಮರಳು ದಂಧೆಯ ಜೊತೆಗೆ ಮೀಟರ್ ಬಡ್ಡಿ ದಂಧೆ ಮಾಡು ತ್ತಿದ್ದ. ಕೋಟ್ಯಾಂತರ ರೂ. ಸಂಪಾದಿಸಿದ್ದ. ಹುಬ್ಬಳ್ಳಿ, ಹಾವೇರಿ ಹಾಗೂ ಮುಂಡಗೋಡ ವ್ಯಾಪ್ತಿಯಲ್ಲಿ ಯಾರಾದರೂ ಕೊಲೆ, ಸುಲಿಗೆ ಕೇಸ್ನಲ್ಲಿ ಜೈಲಿಗೆ ಹೋದರೆ ಅವರಿಗೆ ಆರ್ಥಿಕ ಸಹಾಯ ಮಾಡಿ ಬಿಡಿಸಿಕೊಂಡು ಬರುತ್ತಿದ್ದ. ಅವರನ್ನು ಜೊತೆ ಇಟ್ಕೊಂಡು ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.
ಜಮೀರ್ 1 ಲಕ್ಷ ರೂ. ಸಾಲ ಕೊಟ್ಟರೆ ಅದಕ್ಕೆ ತಿಂಗಳಿಗೆ 30,000 ರೂಪಾಯಿ ಬಡ್ಡಿ ಕಟ್ಟಬೇಕಿತ್ತು. ಅಸಲು ಕಟ್ಟಲು ಹೋದರೆ ಅದನ್ನು ಸ್ವಿಕರಿಸದೆ ಬಡ್ಡಿ ಮಾತ್ರ ತಿಂಗಳಿಗೆ ಕೊಡುವಂತೆ ಅವಾಜ್ ಹಾಕಿಸುತ್ತಿದ್ದ. 30 ಪ್ರತಿಶತ ಬಡ್ಡಿಯಲ್ಲಿ ಶೇ 15 ತಾನು ಪಡೆದು ಇನ್ನುಳಿದ 15 ಹಣವನ್ನು ಬಡ್ಡಿ ವಸೂಲಿ ಮಾಡಿದ ಹುಡುಗರಿಗೆ ಕೊಡುತ್ತಿದ್ದ ಎನ್ನಲಾಗಿದೆ. 150 ಕ್ಕೂ ಹೆಚ್ಚು ಹುಡುಗರ ಸಹಾಯದಿಂದ ಈತ ಮೀಟರ್ ಬಡ್ಡಿ ದಂಧೆ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.
ಆತ ಸಾಲ ನೀಡುವಾಗ ಖಾಲಿ ಚೆಕ್ ಪಡೆಯುತ್ತಾನೆ. ಪೊಲೀಸರು ಮನೆ ಮೇಲೆ ದಾಳಿ ಮಾಡಿದಾಗ 250 ಖಾಲಿ ಚೆಕ್ ಮನೆಯಲ್ಲಿ ಪತ್ತೆ ಆಗಿದೆ. ಜಮೀರ್ ಜೊತೆಗೆ ಬಡ್ಡಿ ವಸೂಲಿ ಕೆಲಸ ಮಾಡುತ್ತಿದ್ದ ಖ್ವಾಜಾಗೆ ಸಾಲ ಬೇಕಿತ್ತು. ಸಾಲ ಕೊಡಲು ಜಮೀರ್ ಒಪ್ಪಿರಲಿಲ್ಲ. ಹಣ ಕೊಟ್ಟಿಲ್ಲ ಎಂಬ ಕೋಪದಲ್ಲಿದ್ದ ಖ್ವಾಜಾ ಹಣಕ್ಕಾಗಿ ತಂಡದ ನೆರವಿನೊಂದಿಗೆ ಆತನನ್ನು ಅಪಹರಿಸಿದ್ದ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.