ಭಾರತದ ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಈ ಪ್ರಶಸ್ತಿ ಗಳಿಸಿದ ಭಾರತದ ಮೊದಲ ಮಧ್ಯಮ ವೇಗಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
2024ನೇ ಸಾಲಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಜಸ್ ಪ್ರೀತ್ ಬುಮ್ರಾ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಪ್ರಶಸ್ತಿ ಪಾತ್ರರಾದರು. ಗಾಯದಿಂದ ಚೇತರಿಸಿಕೊಂಡ ನಂತರ ಕ್ರಿಕೆಟ್ ಗೆ ಭರ್ಜರಿಯಾಗಿ ಮರಳಿದ್ದ ಬುಮ್ರಾ ತವರಿನಲ್ಲಿ ನಡೆದ ಇಂಗ್ಲೆಂಡ್, ಬಾಂಗ್ಲಾದೇಶ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದ ಬುಮ್ರಾ ಇದೀಗ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಈ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ನಂತರದ ಭಾರತದ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಟ್ರಾವಿಸ್ ಹೆಡ್, ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಅವರ ಪೈಪೋಟಿಯನ್ನು ಹಿಮ್ಮೆಟಿಸಿದ ಬುಮ್ರಾ ಪ್ರತಿಷ್ಠಿತ ಪ್ರಶಸ್ತಿ ಗೆದ್ದುಕೊಂಡರು.
ಟಿ-20 ವಿಶ್ವಕಪ್ ನಲ್ಲಿ ಬುಮ್ರಾ 15 ವಿಕೆಟ್ ಗಳಿಸಿದ್ದರು. ಅಲ್ಲದೇ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 15 ಟೆಸ್ಟ್ ಗಳಲ್ಲಿ 71 ವಿಕೆಟ್ ಪಡೆದು ಮಿಂಚಿದ್ದರು.