Menu

ಕಪ್ಪೆಚಿಪ್ಪು ಹೆಕ್ಕುತ್ತಿದ್ದಾಗ ಸಮುದ್ರ ಪಾಲಾದವರ ಸಂಖ್ಯೆ 11ಕ್ಕೆ ಏರಿಕೆ

ಭಟ್ಕಳ ಬಳಿ ಅಳ್ವೆಕೋಡಿ ಕಡಲತೀರದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಭಾನುವಾರ 10 ಮಂದಿಯ ಮೃತದೇಹಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಸೋಮವಾರ ಪತ್ತೆಯಾಗಿದೆ.

ಎನ್‌ಡಿಆರ್‌ಎಫ್‌, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಹೊರತೆಗೆಯಲಾಗಿದೆ. ಇಬ್ಬರು ಮಹಿಳೆಯರನ್ನು ಭಾನುವಾರ ರಕ್ಷಣೆ ಮಾಡಲಾಗಿದೆ. ಮಾಸ್ತಮ್ಮ ನಾಯ್ಕ್ ಅವರನ್ನು ಉಳಿಸಲು ಹೋಗಿ ಅವರ ಮಗ ಉಮೇಶ್​​ ನಾಯ್ಕ್​​ ಕೂಡ ನೀರುಪಾಲಾಗಿದ್ದಾರೆ.

ತಾಯಿ ನೀರಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದರೆ ಮಗ ಉಮೆಶ್​, ಬಂಡೆ ಮೇಲೆ ಕಪ್ಪು ಚಿಪ್ಪು ಹೆಕ್ಕುತ್ತಿದ್ದರು. ತಾಯಿ ನೀರಲ್ಲಿ ಮುಳುಗುತ್ತಿದ್ದುದನ್ನು ಕಂಡು ರಕ್ಷಿಸಲು ಅವರು ಕೂಡ ನೀರಿಗೆ ಹಾರಿದ್ದರು. ತಾಯಿ ದಪ್ಪ ಇದ್ದಿದ್ದರಿಂದ ಎಷ್ಟೇ ಎಳೆಯಲು ಪ್ರಯತ್ನಿಸಿದರೂ ಬದುಕಿಸಲು ಸಾಧ್ಯವಾಗಿಲ್ಲ. ಆತ ನೀರಿನಿಂದ ಹಿಂದಿರುಗುವ ವೇಳೆ ಮತ್ತಿಬ್ಬರು ತಮ್ಮ ರಕ್ಷಣೆಗಾಗಿ ಉಮೇಶ್​​ ಕಾಲು ಎಳೆದಿದ್ದಾರೆ. ಹೀಗಾಗಿ ಅವರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಗಿ ಪ್ರತ್ಯಕ್ಷದರ್ಶಿ ಮಂಜುನಾಥ್ ನಾಯ್ಕ್ ತಿಳಿಸಿದ್ದಾರೆ.

ಈ ದುರಂತದಲ್ಲಿ ಮಾದೇವ ನಾಯ್ಕ್ ಮತ್ತು ಲಕ್ಷ್ಮಿ ನಾಯ್ಕ್ ದಂಪತಿ ಅಸುನೀಗಿದ್ದು, ಮಕ್ಕಳಾದ ದರ್ಶನ (23), ಕಿರ್ತನಾ(20) ದಿಕ್ಕಿಲ್ಲದಂತಾಗಿದ್ದಾರೆ. ಮೃತ ಲಕ್ಷ್ಮೀ ಶಿವರಾಮ ನಾಯ್ಕ್​​ ಅವರ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರಿಗೆ ಓದುತ್ತಿರುವ ನಾಲ್ವರು ಮಕ್ಕಳಿದ್ದಾರೆ. ಈಗ ಅವರೂ ಇಲ್ಲವಾಗಿ ಮಕ್ಕಳು ಅನಾಥರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಭಟ್ಕಳ ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರಲ್ಲಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಇದು ಅತ್ಯಂತ ನೋವಿನ ಹಾಗೂ ದುರದೃಷ್ಟಕರ ಘಟನೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *