ಹೊನ್ನಾವರ ತಾಲೂಕಿನ ಮಂಕಿಯಲ್ಲಿ ಮಲಗಿದ್ದ ಪತ್ನಿಯನ್ನು ಉಸಿರುಗಟ್ಟಿಸಿ ಕೊಂಡು ಹೃದಯಾಘಾತ ಎಂದು ಕಥೆ ಕಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಮೂರು ವರ್ಷದ ಮಗು ಅನಾಥವಾಗಿದೆ.
ಮಖಿ ಗ್ರಾಮದ ೨೭ ವರ್ಷದ ಮಂಗಳಾ ಕೊಲೆಯಾದ ಮಹಿಳೆ, ಪತಿ ಮಂಜುನಾಥ ನಾಯ್ಕ ಕೊಲೆ ಮಾಡಿದ ಆರೋಪಿ. ದದಂಪತಿ ಮಧ್ಯೆ ಸಣ್ಣ-ಪುಟ್ಟ ವಿಚಾರಗಳಿಗೆ ಜಗಳ ನಡೆಯುತ್ತಿತ್ತು. ಗಣಪತಿ ನಾಯ್ಕ ಕುಡಿತದ ಚಟ ಹೊಂದಿದ್ದು, ಕೈಗೆ ಬರುತ್ತಿದ್ದ ಹಣವನ್ನು ಅದಕ್ಕೆ ಖರ್ಚು ಮಾಡುತ್ತಿದ್ದ ಎನ್ನಲಾಗಿದೆ.
ಆಗಸ್ಟ್ 25ರ ಮಧ್ಯರಾತ್ರಿ ದಂಪತಿ ನಡುವೆ ಗಲಾಟೆ ನಡೆದಿದೆ. ರಾತ್ರಿ ಎರಡು ಗಂಟೆಯ ಬಳಿಕ ಕೋಣೆಯಲ್ಲಿ ಮಲಗಿದ್ದ ಮಂಗಳಾ ಮೇಲೆ ಗಣಪತಿ ನಾಯ್ಕ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ಮೃತಪಟ್ಟ ಬಳಿಕ ತಂದೆ, ತಾಯಿಗೆ ಮಂಗಳಾ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾನೆ. ಆಕೆಯ ಕುಟುಂಬಸ್ಥರಿಗೂ ಕರೆ ಮಾಡಿ ಇದೇ ಕಥೆ ಹೇಳಿದ್ದಾನೆ. ಆಟೋದಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಹೋಗುತ್ತಿದ್ದಾಗ ದಾರಿ ಮಧ್ಯೆ ಪ್ರಾಣ ಹೋಗಿದ್ದರಿಂದ ವಾಪಸ್ ಕರೆ ತಂದಿರುವುದಾಗಿ ತಿಳಿಸಿದ್ದಾನೆ. ಅನುಮಾನಗೊಂಡ ಮಂಗಳಾ ಅವರ ಸಹೋದರಿ ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಮನೆಯ ಪಕ್ಕದ ಕಟ್ಟಡದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಆಟೋ ಹೊರಗೆ ತೆಗೆದುಕೊಂಡು ಹೋಗಿಲ್ಲ ಎಂಬುದು ಗೊತ್ತಾಗಿದೆ. ಗಣಪತಿ ನಾಯ್ಕನ ಮೇಲಿನ ಅನುಮಾನ ಬಲಗೊಂಡು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಂಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.


