ರಸ್ತೆ ಅಪಘಾತದಿಂದ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಈ ವಿಚಾರದಲ್ಲಿ ಪರಸ್ಪರ ದೂಷಿಸಿಕೊಂಡ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರ ಹೊರವಲಯದ ಶಿರವಾಡದಲ್ಲಿ ನಡೆದಿದೆ.
ವಿಜಯ ವಡ್ಡರ್ (36) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ವೆಂಕಟೇಶ್ ವಡ್ಡರ್ (38) ಆಳೇವಾಡ–ಕೋಡಿಬಾಗ್ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಮಗನಿಗೆ ಅಪಘಾತವಾಗಿ ತಲೆಗೆ ಗಾಯವಾಗಿತ್ತು. ಕೂಡಲೇ ಆತನನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಆತನಿಗೆ 18 ವರ್ಷ ತುಂಬಿದ ಬಳಿಕ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಅಪಘಾತ ನಡೆದಾಗ ವೆಂಕಟೇಶ್ ಊರಿನಲ್ಲಿ ಇರಲಿಲ್ಲ, ವಿಷಯ ತಿಳಿದು ಬಂದ ಅವರು, ಮಗನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಪತ್ನಿ ವಿಜಯಾ ಅವರನ್ನು ದೂಷಿಸಿದ್ದರು. ಮಗನ ಅಪಘಾತದಿಂದ ಖಿನ್ನರಾಗಿದ್ದ ವಿಜಯಾರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯಾ ಆತ್ಮಹತ್ಯೆಗೆ ವೆಂಕಟೇಶ್ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಬಳಿಕ ವೆಂಕಟೇಶ್ ಆಸ್ಪತ್ರೆಯಿಂದ ಹೊರಟು, ಪತ್ನಿಗೆ ಆದ ಗತಿಯೇ ತಮಗೂ ಆಗಲಿದೆ ಎಂದು ಹೇಳಿದ್ದರು. ಮಂಗಳವಾರ ಆಳೇವಾಡ–ಕೋಡಿಬಾಗ್ ಹಿನ್ನೀರಿನಲ್ಲಿ ಮೃತದೇಹ ತೇಲುತ್ತಿರುವುದನ್ನು ಕೆಲವರು ಗಮನಿಸಿದ್ದಾರೆ. ಬಳಿಕ ವೆಂಕಟೇಶ್ ಅವರ ಮೃತದೇಹ ಎಂಬುದು ಗೊತ್ತಾಗಿದೆ.


