ದ್ವಿಚಕ್ರವಾಹನದಲ್ಲಿ ಕೊಡೊಯ್ಯುತ್ತಿದ್ದ ಗಿಟಾರ್ ಗೆ ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಪತ್ತೆಗಾಗಿ ಅಳವಡಿಸಲಾಗಿರುವ AI ಕ್ಯಾಮೆರಾ ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಗಿಟಾರ್ ಅನ್ನು “ಹೆಲ್ಮೆಟ್ ಧರಿಸದ ಹಿಂಬದಿ ಸವಾರ” ಎಂದು ಗುರುತಿಸಿ ದಂಡ ವಿಧಿಸಿದೆ.
ಸೌವಿಕ್ ದತ್ತ ಎಂಬವರು ಸ್ಕೂಟಿಯಲ್ಲಿ ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿಯತ್ತ ಪ್ರಯಾಣಿಸುವಾಗ ಗಿಟಾರ್ ಒಂದನ್ನು ಬೆನ್ನಿಗೆ ಬ್ಯಾಗ್ ರೂಪದಲ್ಲಿ ಹಾಕಿಕೊಂಡಿದ್ದರು. ಹೆಬ್ಬಾಳ ಸಮೀಪದ ಟ್ರಾಫಿಕ್ ಸಿಗ್ನಲ್ ಬಳಿ ಅಳವಡಿಸಲಾಗಿರುವ AI ಕ್ಯಾಮೆರಾ, ಹಿಂಬದಿಯಲ್ಲಿದ್ದ ಗಿಟಾರ್ ಅನ್ನು ಮನುಷ್ಯನ ತಲೆ ಎಂದು ತಪ್ಪಾಗಿ ಗುರುತಿಸಿ, “ಹಿಂಬದಿ ಸವಾರ” ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿತ್ತು.
ಈ ಚಲನ್ ಸೌವಿಕ್ ದತ್ತ ಅವರ ಪತ್ನಿಗೆ ರವಾನೆಯಾಗಿದೆ. ಆನ್ಲೈನ್ನಲ್ಲಿ ಫೋಟೋ ಸಮೇತ ಚಲನ್ ತಲುಪಿದಾಗ ಸ್ಕೂಟರ್ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ನಿಜವಾಗಿಯೂ ಒಂದು ಗಿಟಾರ್ ಎಂಬುದನ್ನು ಗಮನಿಸಿ AI ಕ್ಯಾಮೆರಾದ ಈ ಎಡವಟ್ಟನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋ ಮತ್ತು ಚಲನ್ ವಿವರಗಳು ಸೋಷಿಯಲ್ ಮೀಡಿಯಾದಲ್ಲಿ ಹರಡಿದ ಬಳಿಕ ಅನೇಕರು AI ಕ್ಯಾಮೆರಾದ ಈ ತಪ್ಪು ಗುರುತಿಸುವಿಕೆ ಗಂಭೀರ ಸಮಸ್ಯೆ ಎಂದು ಪರಿಗಣಿಸಿದ್ದಾರೆ. ಕೆಲವರು ತಮಾಷೆಯಾಗಿ ಪರಿಗಣಿಸಿದರೆ, ಹಲವರು ತಂತ್ರಜ್ಞಾನದ ನಿಖರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಗಿಟಾರ್ಗೂ ಹೆಲ್ಮೆಟ್ ಕಡ್ಡಾಯವೇ ಎಂದು ಅನೇಕರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರತಿಕ್ರಿಯಿಸಿರುವ ಪೊಲೀಸರು, ಸಮಸ್ಯೆ ಎದುರಿಸಿದವರು ತಮ್ಮನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ. AI ಕ್ಯಾಮೆರಾದಿಂದ ಉಂಟಾದ ತಪ್ಪು ಚಲನ್ಗಳನ್ನು ಪರಿಶೀಲಿಸಿ ರದ್ದುಗೊಳಿಸುವ ಪ್ರಕ್ರಿಯೆ ಇದೆ ಎಂದು ತಿಳಿಸಿದ್ದಾರೆ.


