Saturday, September 26, 2026
Menu

ಬಾರದ ಅನುದಾನ: ಗುತ್ತಿಗೆದಾರರ ಕಿರುಕುಳಕ್ಕೆ ಡೆತ್‌ನೋಟ್‌ ಬರೆದಿಟ್ಟು ಗದಗದ ಅಧಿಕಾರಿ ನಾಪತ್ತೆ

ಸರ್ಕಾರದಿಂದ ಅನುದಾನ ಬಾರದೆ ಉಪ ಗುತ್ತಿಗೆದಾರರ ಕಿರುಕುಳದಿಂದ ಬೇಸತ್ತ ಗದಗದ ಕೆಆರ್‌ಐಡಿಎಲ್‌ ಎಇಇ ಫರ್ವಿಜ್‌ ಧಾರವಾಡ ಆತ್ಮಹತ್ಯೆ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಬೆಟಗೇರಿ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೆಆರ್​ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಫರ್ವೀಜ್, ಕೋಟಿಗಟ್ಟಲೆ ಅನುದಾನ ಬಾರದ ಕಾರಣ ನಿತ್ಯ ಸಬ್ ಗುತ್ತಿಗೆದಾರರು ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದಾರೆ. ಫೋನ್ ಮೂಲಕವೂ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು, ಪರಿಸ್ಥಿತಿ ನಿಭಾಯಿಸಲು ಆಗದೆ ಜೀವನ ಕೊನೆಗಾಣಿಸುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಉಪವಿಭಾಗಕ್ಕೆ ಅನುದಾನ ನೀಡಿ ಸಮಸ್ಯೆ ಬಗೆಹರಿಸಿ, ದಯವಿಟ್ಟು ನನ್ನ ಕುಟುಂಬಕ್ಕೆ ಕಿರುಕುಳ ನೀಡಬೇಡಿ ಎಂದು ಉಲ್ಲೇಖಿಸಿದ್ದಾರೆ.’

ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಹೊರಟಿದ್ದ ಫರ್ವೀಜ್, ಪತ್ನಿ ಸೆಗುಪ್ತಾರಿಗೆ ಕರೆ ಮಾಡಿ ಬೆಂಗಳೂರು ತಲುಪಿರುವುದಾಗಿ ಹೇಳಿದ್ದರು. ನಂತರ ಅವರ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಪತ್ನಿಯು ಅತ್ತೆ ಮಾವನಿಗೆ ವಿಷಯ ತಿಳಿಸಿದ್ದರು. ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್​ಗೆ ಕರೆ ಮಾಡಿ ವಿಚಾರಿಸಿದಾಗ ಫರ್ವೀಜ್ ಆಫೀಸಿಗೆ ಬಂದಿಲ್ಲವೆಂಬುದು ಕುಟುಂಬದವರಿಗೆ ತಿಳಿದಿದೆ.

ಕುಟುಂಬದವರು ಗದಗ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಶೇಷ ಪಡೆ ರಚಿಸಿ ಅಧಿಕಾರಿಯನ್ನು ಪತ್ತೆ ಹಚ್ಚಬೇಕು ಮತ್ತು ಸಮಸ್ಯೆಯನ್ನು ಸರ್ಕಾರ ತಕ್ಷಣವೇ ಬಗೆಹರಿಸಬೇಕೆಂದು ಮನವಿ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *